ನ್ಯೂಸ್ ನಾಟೌಟ್ : ಅಟೋಮೊಬೈಲ್ ಹಾಗೂ ಬಿಡಿ ಭಾಗಗಳ ಮಾಲಿಕರಾಗಿರುವ ವರ್ಗೀಸ್ ಎಂಬುವವರ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ದೋಚಿದ್ದ ಕಳ್ಳರು ಕೊನೆಗೂ ಸೆರೆಯಾಗಿದ್ದಾರೆ.ಒಂದೂವರೆ ವರ್ಷಗಳ ನಂತರ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪೇರಡ್ಕ ಪೆಲತ್ರಾಣೆ ನಿವಾಸಿ ಸದ್ದಾಂ ಮತ್ತು ಮೀನಾಡಿ ನಿವಾಸಿ ತಾಜುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ.ಸದ್ದಾಂ ಎಂಬಾತ ಈ ಹಿಂದೆ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿಯೂ ಭಾಗಿಯಾಗಿದ್ದಲ್ಲದೇ ಹಲವು ಪ್ರಕರಣಗಳ ಆರೋಪಿ.ಈತನ ಮೊಬೈಲ್ ಸಿಡಿಆರ್ ಆಧಾರದಲ್ಲಿ ಕಳ್ಳತನ ಪ್ರಕರಣ ಪತ್ತೆಹಚ್ಚಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಒಂದೂವರೆ ವರ್ಷಗಳ ಹಿಂದೆ ಅಂದರೆ 2021 ರ ಡಿಸೆಂಬರ್ 13ರಂದು ಎಂದಿನಂತೆ ಬೆಳಿಗ್ಗೆ 8:45ರ ಸಮಯ.ಮಕ್ಕಳನ್ನು ಶಾಲೆಗೆ ಹೊರಡಿಸಿ ಮನೆಗೆ ಬೀಗ ಹಾಕಿ ಶಾಲೆಗೆ ಕಳುಹಿಸಲಾಗಿತ್ತು.ಬಳಿಕ ಶಾಜನ್ ಹಾಗೂ ಪತ್ನಿ ತಮ್ಮ ಕೆಲಸಕ್ಕೆ ಹೊರಟಿದ್ದರು. ಇದೇ ವೇಳೆ ಕಳ್ಳರು ಹೊಂಚು ಹಾಕಿ ಕಳ್ಳತನ ಮಾಡಿದ್ದಾರೆ. ಕೆಲಸ ಮುಗಿಸಿ ದಂಪತಿ ಮನೆಗೆ ಬರುತ್ತಿದ್ದ ವೇಳೆ ಬೀಗ ತೆಗೆದು ಒಳನೋಡುವಾಗ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು.ಮನೆಯ ಹಿಂಬಾಗಿಲನ್ನು ಪರೀಕ್ಷಿಸಿದಾಗ ಬಾಗಿಲು ಒಡೆದಿದ್ದು ಕಳ್ಳತನವಾಗಿರೋದು ಗಮನಕ್ಕೆ ಬಂದಿದೆ.
ಈ ವೇಳೆ ಸುಮಾರು 24ಗ್ರಾಂ ತೂಕದ ಚಿನ್ನದ ಸರ,8 ಗ್ರಾಂ ತೂಕದ ಚಿನ್ನದ ಸರ,6ಗ್ರಾಂ ತೂಕದ ಚಿನ್ನದ ಬೆಂಡೋಲೆ,ಮಕ್ಕಳ ಬೆಂಡೋಲೆಗಳು ಸೇರಿದಂತೆ ಅಂದಾಜು ರೂಪಾಯಿ 1.50 ಲಕ್ಷ ಮೌಲ್ಯದ ಸುಮಾರು 41ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಸಂ 0150/2021 ರಂತೇ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಕಳ್ಳತನವಾದ 41ಗ್ರಾಂ ಚಿನ್ನದಲ್ಲಿ 17ಗ್ರಾಂ ಚಿನ್ನವನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಉಳಿದ ಚಿನ್ನಾಭರಣ ಪತ್ತೆಯಾಗಬೇಕಿದೆ.
ಆರೋಪಿ ಸದ್ದಾಂ ಹೇಳಿಕೆ ನೀಡಿದಂತೆ ಕಳ್ಳತನಕ್ಕೆ ಆರೋಪಿಗಳು ಬಳಸಿದ್ದ ಜೀಪನ್ನು ವಶಕ್ಕೆ ಪಡೆಯಲು ಕಡಬ ಪೊಲೀಸರು ಆರೋಪಿ ಸದ್ದಾಂನ ಮನೆಗೆ ಹೋದಾಗ ಮನೆಯಲ್ಲಿನ ಮಹಿಳೆಯರು ಮಕ್ಕಳೊಂದಿಗೆ ಪೊಲೀಸರನ್ನು ಅಡ್ಡಗಟ್ಟಿದ್ದಾರೆ.ನಮ್ಮ ಮನೆಗೆ ಮಹಿಳಾ ಪೊಲೀಸರೊಂದಿಗೆ ಬನ್ನಿ ಎಂದು ಗಲಾಟೆ ಮಾಡಿ, ಜೀಪನ್ನು ಬಿಟ್ಟುಕೊಡದ ಘಟನೆಯೂ ನಡೆದಿದೆ ಎನ್ನಲಾಗಿದೆ.