ನ್ಯೂಸ್ ನಾಟೌಟ್ :ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಆಚರಣೆ ಜುಲೈ19 ರಂದು ಸುಳ್ಯ ಕೇರ್ಪಳದ ಭಂಟರ ಭವನದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭ, ಮಾಧ್ಯಮ ವಿಚಾರ ಸಂಕಿರಣ, ಪತ್ರಕರ್ತರ ಸಮ್ಮಿಲನ, ಸಮಾರೋಪ ಸಮಾರಂಭ ಹಾಗೂ ಸನ್ಮಾನ, ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ ಎಂದು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸುವರು. ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ. ಕೆ.ವಿ ಚಿದಾನಂದ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಗುಜರಾತ್ ಉದ್ಯಮಿ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್.ಕೆ ನಾಯರ್, ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಗಂಗಾಧರ ಮಟ್ಟಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸಂಜೆ 5ರಿಂದ ಸಮಾರೋಪ ಸಮಾರಂಭ ಹಾಗೂ ಮಾಜಿ ಅಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಸನ್ಮಾನ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸುವರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ಎಸ್.ಅಂಗಾರ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ.ರೇಣುಕಾಪ್ರಸಾದ್ ಕೆ.ವಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ದ.ಕ.ಜಿಲ್ಲಾ ವಾರ್ತಾಧಿಕಾರಿ ರವಿರಾಜ್ ಹೆಚ್.ಜಿ. ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬೆಳ್ಳಿ ಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಕುಮಾರ್ ನಾಯರ್ಕೆರೆ ಮಾತನಾಡಿ ಪೂ.11.30ರಿಂದ ಹಿರಿಯ ಪತ್ರಕರ್ತ ಶಿವ ಸುಬ್ರಹ್ಮಣ್ಯ ಕಲ್ಮಡ್ಕ ಅಧ್ಯಕ್ಷತೆಯಲ್ಲಿ ಮಾಧ್ಯಮ ವಿಚಾರ ಸಂಕಿರಣ ನಡೆಯಲಿದೆ. ವಿಸ್ತಾರ ನ್ಯೂಸ್ ಬೆಂಗಳೂರು ಇದರ ಸುದ್ದಿ ಸಂಪಾದಕ ಹರೀಶ್ ಕೇರ ಹಾಗೂ ಸುದ್ದಿಯಾನ ಡಿಜಿಟಲ್ ಚಾನೆಲ್ ಸಂಪಾದಕ ಹರಿಪ್ರಸಾದ್ ಅಡ್ಪಂಗಾಯ ವಿಚಾರಮಂಡನೆ ಮಾಡಲಿದ್ದಾರೆ. ಅಪರಾಹ್ನ 3 ಗಂಟೆಯಿಂದ 5 ಗಂಟೆಯ ತನಕ ರಾಜ್ಯದ ವಿವಿಧ ಕಡೆಗಳಲ್ಲಿ ಕಾರ್ಯನಿರ್ವಹಿಸುವ ಸುಳ್ಯದ ಪತ್ರಕರ್ತರ ಸಮ್ಮಿಲನ ನಡೆಯಲಿದೆ ಎಂದು ತಿಳಿಸಿದ್ದಾರೆ.ಬೆಳಗ್ಗೆ 9 ರಿಂದ 10ರ ತನಕ ಸುಮನಾರಾವ್ ಪುತ್ತೂರು ಹಾಗು ಬಳಗದವರಿಂದ ಸಂಗೀತ ಸಂಭ್ರಮ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2 ರಿಂದ 3ರ ತನಕ ರಂಗಮಯೂರಿ ಕಲಾಶಾಲೆ ಸುಳ್ಯ, ನೂಪುರ ನಾಟ್ಯ ಸಂಸ್ಥೆ ಸುಳ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.ರಾತ್ರಿ 7.30 ರಿಂದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದಿಂದ ಗೀತ ಸಾಹಿತ್ಯ ಸಂಭ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಗಂಗಾಧರ ಮಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ತಾಲೂಕು ಸಂಘದ ಕೋಶಾಧಿಕಾರಿ ದಯಾನಂದ ಕಲ್ನಾರ್, ಬೆಳ್ಳಿಹಬ್ಬ ಸಮಿತಿಯ ಕೋಶಾಧಿಕಾರಿ ಗಿರೀಶ್ ಅಡ್ಪಂಗಾಯ ಇದ್ದರು.