ನ್ಯೂಸ್ ನಾಟೌಟ್ : ಇತ್ತೀಚೆಗೆ ಸೀಮಾ ಹೈದರ್ ಪಾಕ್ ನಿಂದ ತನ್ನ ಪ್ರಿಯಕರನನ್ನು ಹುಡುಕಿ ಭಾರತಕ್ಕೆ ಅಕ್ರಮವಾಗಿ ಬಂದು ಮತಾಂತರವಾದ ಬೆನ್ನಲ್ಲೆ ಇಂತಹ ಹಲವು ಸುದ್ದಿಗಳು ಬೆಳಕಿಗೆ ಬಂದವು, ಈಗ ಅಂತಹದ್ದೇ ವಿಚಿತ್ರ ಮದುವೆ ಸುದ್ದಿಯೊಂದು ಸುದ್ದಿಯಲ್ಲಿದೆ. ಫೇಸ್ಬುಕ್ನಿಂದ ಪರಿಚಯವಾದ ವ್ಯಕ್ತಿಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತಲುಪಿದ್ದ ಭಾರತೀಯ ವಿವಾಹಿತ ಮಹಿಳೆ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ವಿವಾಹವಾಗಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿದೆ ಎನ್ನಲಾಗಿದೆ.
ಇದೀಗ ಪಾಕ್ ಗೆ ತೆರಳಿದ್ದ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ “ಫಾತಿಮಾ” ಎಂದು ಬದಲಾಯಿಸಿಕೊಂಡು ನಸ್ರುಲ್ಲಾ ಅವರೊಂದಿಗೆ ವಿವಾಹವಾಗಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಅಪ್ಪರ್ ದಿರ್ನಲ್ಲಿರುವ ಜಿಲ್ಲಾ ನ್ಯಾಯಾಲಯದಲ್ಲಿ ಇಬ್ಬರ ನಿಕಾಹ್ ಕುಟುಂಬದ ಸಮ್ಮುಖದಲ್ಲಿ ನಡೆದಿದೆ. ಮದುವೆಯ ಬಳಿಕ ನವ ಜೋಡಿಯು’ಅಂಜು ವೆಡ್ಸ್ ನಸ್ರುಲ್ಲಾ’ ಶೀರ್ಷಿಕೆಯ ವಿಡಿಯೋವನ್ನು ಮಾಡಿದೆ. ಈ ವಿಡಿಯೋ ಟ್ವಿಟರ್ ನಲ್ಲಿ ಹರಿದಾಡುತ್ತಿದ್ದು ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಅಂಜು ಹಾಗೂ ನಸ್ರುಲ್ಲಾ ಪತಿ – ಪತ್ನಿಯರಾಗಿ ಪರ್ವತ ತಾಣಗಳಲ್ಲಿ ಸುತ್ತಾಡುವ ದೃಶ್ಯವಿದೆ.
ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆ ಅಂಜು ಫೇಸ್ ಬುಕ್ ನಲ್ಲಿ ಪರಿಚಯವಾಗಿರುವ ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ನಸ್ರುಲ್ಲಾ ಅವರನ್ನು ಭೇಟಿಯಾಗಲು ಪಾಕ್ ಗೆ ತಲುಪಿದ್ದರು. ಆಕೆ ಪ್ರಯಾಣದ ಎಲ್ಲಾ ದಾಖಲೆಗಳನ್ನು ಹಿಡಿದುಕೊಂಡು ಪಾಕಿಸ್ತಾನಕ್ಕೆ ತಲುಪಿದ್ದಾಳೆ. ಅಂಜು ವಾಟ್ಸಾಪ್ ಮೂಲಕ ಕರೆ ಮಾಡಿ ನಾನು ಲಾಹೋರ್ ನಲ್ಲಿದ್ದೇನೆ. 3-4 ದಿನದಲ್ಲಿ ಬರುವುದಾಗಿ ಹೇಳಿದ್ದಳು ಎಂದು ಆಕೆಯ ಪತಿ ಅರವಿಂದ್ ಮಾಧ್ಯಮಕ್ಕೆ ತಿಳಿಸಿದ್ದರು. ಇದಾದ ಬಳಿಕ ಅಂಜು ಶೀಘ್ರದಲ್ಲಿ ಭಾರತಕ್ಕೆ ಬರುತ್ತೇನೆ. ಇಲ್ಲಿ ಮದುವೆಯೊಂದರಲ್ಲಿ ಭಾಗಿಯಾಗಲು ಬಂದಿದ್ದೇನೆ ಎಂದು ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿತ್ತು.
ಮಲಕಂದ್ ವಿಭಾಗದ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ನಾಸಿರ್ ಮೆಹಮೂದ್ ಸತ್ತಿ ಅವರು ಅಂಜು (35) ಮತ್ತು ನಸ್ರುಲ್ಲಾ (29) ಅವರ ನಿಕಾಹ್ ಆಗಿದ್ದು ನಿಜವೆಂದಿದ್ದಾರೆ. ಅಂಜು ಇಸ್ಲಾಂಗೆ ಮತಾಂತರಗೊಂಡ ನಂತರ ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೋರ್ಟ್ ನಲ್ಲಿ ಮದುವೆಯಾದ ಬಳಿಕ ಪೊಲೀಸ್ ಭದ್ರತೆಯಲ್ಲಿ ಅಂಜು ಅವರನ್ನು ಗಂಡನ ಮನೆಗೆ ಕರೆದುಕೊಂಡು ಹೋಗಲಾಯಿತೆಂದು ವರದಿ ತಿಳಿಸಿದೆ.
ವೀಸಾ ಅವಧಿ ಮುಗಿದ ಬಳಿಕ ಆಗಸ್ಟ್ 20 ರ ರಂದು ನಾನು ಭಾರತಕ್ಕೆ ಬರುತ್ತೇನೆ. ನಸ್ರುಲ್ಲಾ ಅವರೊಂದಿಗೆ ವಿವಾಹವಾಗುವ ಯೋಜನೆ ಇಲ್ಲವೆಂದು ಮಾಧ್ಯಮಗಳಿಗೆ ಅಂಜು ಹೇಳಿದ್ದರು ಆದರೆ ಈಗ ಮದುವೆಯಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.