ನ್ಯೂಸ್ ನಾಟೌಟ್ : ಶಿಕ್ಷಕರು ಅಂದ್ರೆ ದೇವರಿಗೆ ಸಮಾನ ಅಂತ ಹೇಳ್ತೀವಿ.ಮಗು ಶಾಲೆ ಮೆಟ್ಟಿಲು ಹತ್ತಿ ಅಕ್ಷರಭ್ಯಾಸ ಕಲಿಯುವ ಸಂದರ್ಭ.ಸಣ್ಣ ವಯಸ್ಸಲ್ಲಿ ಮನಸ್ಸು ಚಂಚಲವಾಗಿರುತ್ತೆ. ಮಕ್ಕಳು ನಿಯಂತ್ರಣಕ್ಕೆ ಸಿಗೋದೇ ಕಷ್ಟ.ಆ ಸಮಯದಲ್ಲಿ ಮಗುವಿಗೆ ಅರ್ಥ ಆಗುವ ಹಾಗೆ ಪಾಠ ಹೇಳಿ ಕೊಡುವವರೇ ಗ್ರೇಟ್ ಅನಿಸಿಕೊಳ್ಳುತ್ತಾರೆ.ಮಕ್ಕಳಿಗೂ ಇಂತಹ ಶಿಕ್ಷಕರ ಮೇಲೆ ತುಸು ಒಲವು ಜಾಸ್ತಿ.ಇದೇ ಕಾರಣಕ್ಕಾಗಿ ಇರಬೇಕು , ಅನೇಕರು ಬಾಲ್ಯದ ದಿನಗಳ ಶಿಕ್ಷಕರನ್ನು ಸ್ಮರಿಸಿಕೊಳ್ಳೋದಿದೆ.
ಆದರೆ ಈ ಘಟನೆ ಅದಕ್ಕೆ ತದ್ವಿರುದ್ಧ ಎಂಬಂತಿದೆ.ಇಲ್ಲೊಬ್ಬಳು ಶಿಕ್ಷಕಿಯನ್ನು ಗಲ್ಲಿಗೇರಿಸಲಾಗಿದೆ. ಚೀನಾದಲ್ಲಿ ನಡೆದ ಭಯಾನಕ ಘಟನೆಯಿದು. ಈಕೆ ನಾಲ್ಕು ವರ್ಷಗಳ ಹಿಂದೆ ಶಿಶುವಿಹಾರದಲ್ಲಿ ತಯಾರಾದ ಅಂಬಲಿಯಲ್ಲಿ ಸೋಡಿಯಂ ನೈಟ್ರೇಟ್ ಬೆರೆಸಿ ಒಂದು ಮಗುವನ್ನು ಕೊಂದಿದ್ದು ಅಲ್ಲದೇ, ಸುಮಾರು 24 ಮಕ್ಕಳು ಅಸ್ವಸ್ಥರಾಗುವಂತೆ ಮಾಡಿದ್ದಳು ಎನ್ನುವ ಕೇಸ್ನಲ್ಲಿ ಶಿಕ್ಷಕಿಗೆ ಮರಣದಂಡನೆ ವಿಧಿಸಲಾಗಿದೆ.
ಈ ಶಿಕ್ಷಕಿಯ ಹೆಸರು ವಾಂಗ್ ಯನ್ (39). ಈಕೆಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಹೆನಾನ್ ಪ್ರಾಂತ್ಯದ Jiaozuo cityಯ ಜನಸಾಮಾನ್ಯರ ನ್ಯಾಯಾಲಯ 2020ರ ಸೆಪ್ಟೆಂಬರ್ನಲ್ಲಿ ಮರಣದಂಡನೆ ವಿಧಿಸಿತ್ತು. ಈ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಶಿಕ್ಷಕಿ ವಿಫಲರಾದ ಹಿನ್ನೆಲೆಯಲ್ಲಿ ಈಗ ನೇಣಿಗೆ ಏರಿಸಲಾಗಿದೆ ಎಂಬ ಸ್ಪೋಟಕ ವರದಿ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಶಿಶುವಿಹಾರದಲ್ಲಿರುವ ತಮ್ಮ ಸಹೋದ್ಯೋಗಿ ಶಿಕ್ಷಕಿಯೊಂದಿಗೆ ವಾಗ್ವಾದವೇರ್ಪಟ್ಟಿತ್ತು.ಆಕೆಯ ಮೇಲಿನ ಸಿಟ್ಟಿನಲ್ಲಿ ಮಕ್ಕಳ ಆರೋಗ್ಯ ಚೆಲ್ಲಾಟವಾಡಿದ ಈಕೆ ಪುಟ್ಟ ಮಕ್ಕಳು ಉಣ್ಣುವ ಆಹಾರಕ್ಕೆ ಸೋಡಿಯಂ ನೈಟ್ರೇಟ್ ಖರೀದಿ ಮಾಡಿ ಆಹಾರಕ್ಕೆ ಸುರಿದಿದ್ದಾಳೆ.
ಏನೂ ಅರಿಯದ ಕಂದಮ್ಮಗಳು ಈ ವಿಷ ಭರಿತ ಅಂಬಲಿ ಸೇವಿಸಿದ್ದಾರೆ.ಅಂಬಲಿಯೂ ಸಿಹಿಯಾಗಿದ್ದರಿಂದ ಮಕ್ಕಳು ಇಷ್ಟ ಪಟ್ಟು ತಿಂದಿದ್ದರು.ಆದರೆ ಇದನ್ನು ಸೇವಿಸಿ ಕೆಲ ಕ್ಷಣದವರೆಗೂ ಯಾವುದೇ ವ್ಯತ್ಯಾಸಗಳಾಗಿರಲಿಲ್ಲ.ಆದರೆ ನಿಧಾನಕ್ಕೆ ದೇಹವನ್ನೆಲ್ಲಾ ವ್ಯಾಪಿಸಿತು. ಮೈತುಂಬ ವಿಷವೇರಿತ್ತು.
2019ರ ಮಾರ್ಚ್ನಲ್ಲಿ ಶಿಕ್ಷಕಿ ವಾಂಗ್ಯನ್ ಅವರು ಈ ಕೃತ್ಯ ಮಾಡಿದ್ದರು.2020ರ ವೇಳೆಗೆ ಒಂದು ಮಗು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿತ್ತು. ಹಾಗೇ, ಹಲವು ಮಕ್ಕಳು ಅನಾರೋಗ್ಯಕ್ಕೀಡಾಗಿದ್ದರು. ತಪಾಸಣೆ ಮಾಡಿದಾಗ ಎಲ್ಲ ಮಕ್ಕಳ ದೇಹದಲ್ಲೂ ಸೋಡಿಯಂ ನೈಟ್ರೇಟ್ ಅಂಶ ಪತ್ತೆಯಾಗಿತ್ತು. ಕೇಸ್ ಕೋರ್ಟ್ ಮೆಟ್ಟಿಲೇರಿತ್ತು. ಶಿಕ್ಷಕಿಯ ಅಪರಾಧ ಸಾಬೀತಾಗಿತ್ತು.ಹೀಗಾಗಿ ಪಾಪಿ ಶಿಕ್ಷಕಿಯನ್ನು ಗಲ್ಲಿಗೇರಿಸಲಾಗಿದೆ.