ನ್ಯೂಸ್ ನಾಟೌಟ್ : ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೇಶದ ಅತಿ ಶ್ರೀಮಂತ ಶಾಸಕರು ಎಂಬ ಪಟ್ಟ ಸಿಕ್ಕಿದೆ. ಅಸೋಸಿಯೇಷನ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ (NEW) ಸಂಸ್ಥೆಗಳು ಜಂಟಿಯಾಗಿ ಬಿಡುಗಡೆ ಮಾಡಿರುವ ಅಧ್ಯಯನ ವರದಿಯೊಂದರಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ. ಡಿಕೆಶಿ ಅವರ ಒಟ್ಟಾರೆ ಆಸ್ತಿ ಮೌಲ್ಯ 1,413 ಕೋಟಿ ರೂ.ಗಳಾಗಿದೆ ಎಂದು ವರದಿಯಲ್ಲಿ ತಿಳಿಸಿಲಾಗಿದ್ದು, , ದೇಶದ ಟಾಪ್ 3 ಶ್ರೀಮಂತ ಶಾಸಕರ ಸ್ಥಾನಗಳೂ ಕರ್ನಾಟಕಕ್ಕೇ ಒಲಿದಿವೆ ಎನ್ನುವುದು ವಿಶೇಷ.
ಭಾರತದ ಟಾಪ್ 3 ಸಿರಿವಂತ ಶಾಸಕರ ಪಟ್ಟಿಯಲ್ಲಿಯೂ ರಾಜ್ಯದ ಶಾಸಕರೇ ಇದ್ದು, ಸಂಸ್ಥೆಗಳು ಬಿಡುಗಡೆ ಮಾಡಿರುವ ದೇಶದ ಸಿರಿವಂತ ಶಾಸಕರ ಪಟ್ಟಿಯ ಟಾಪ್ 20ರಲ್ಲಿ ಕೂಡ 12 ಮಂದಿ ಶಾಸಕರು ರಾಜ್ಯದವರೇ ಆಗಿರುವುದು ವಿಶೇಷ.
ಈ ವರ್ಷ ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವಾಗ ರಾಜಕಾರಣಿಗಳು ಸಲ್ಲಿಸಿದ್ದ ಆಸ್ತಿ ವಿವರಗಳನ್ನು ಆಧರಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಅಧ್ಯಯನ ವರದಿಯ ಪ್ರಕಾರ, ರಾಜ್ಯದ ಒಟ್ಟಾರೆ ಶಾಸಕರ ಪೈಕಿ ಶೇ. 14ರಷ್ಟು ಶಾಸಕರು ಶತಕೋಟಿ ಒಡೆಯರು. ಭಾರತದ ಯಾವುದೇ ಒಂದು ರಾಜ್ಯದಲ್ಲಿ ಹೀಗೆ ಶೇಕಡಾವಾರು ಲೆಕ್ಕಾಚಾರದಲ್ಲಿ ಅತಿ ಹೆಚ್ಚು ಶತಕೋಟಿ ಒಡೆಯರು ಇರುವುದು ಕರ್ನಾಟಕದಲ್ಲೇ ಎಂದು ಎಡಿಆರ್ ವರದಿ ಹೇಳಿದೆ. ಭಾರತದ ಒಟ್ಟಾರೆ ಶಾಸಕರ ಆಸ್ತಿ ಮೌಲ್ಯಗಳನ್ನು ಲೆಕ್ಕ ಹಾಕಿದರೆ ಸರಾಸರಿಯಾಗಿ ಪ್ರತಿಯೊಬ್ಬ ಶಾಸಕನು 64.3 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಟಾಪ್ 1ರಲ್ಲಿ ಡಿ.ಕೆ. ಶಿವಕುಮಾರ್ ಇದ್ದರೆ, ಟಾಪ್ 2ರಲ್ಲಿ ಗೌರಿ ಬಿದನೂರು ಶಾಸಕ ಎಚ್. ಕೆ. ಪುಟ್ಟಸ್ವಾಮಿ ಗೌಡ ಇದ್ದಾರೆ. ಇವರ ಆಸ್ತಿ ಮೌಲ್ಯ 1,267 ಕೋಟಿ ರೂ.ಗಳಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೂರನೇ ಸ್ಥಾನದಲ್ಲಿ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಶಾಸಕ ಪ್ರಿಯಾ ಕೃಷ್ಣ ಅವರಿದ್ದು ಅವರ ಒಟ್ಟಾರೆ ಆಸ್ತಿ ಮೌಲ್ಯ 1,156 ಕೋಟಿ ರೂ. ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.