ನ್ಯೂಸ್ ನಾಟೌಟ್ : ಹುಟ್ಟುತ್ತಾ ಅಣ್ಣ -ತಮ್ಮಂದಿರು ಬೆಳೆಯುತ್ತಾ ದಾಯದಿಗಳು ಎಂಬ ಮಾತಿದೆ. ಆದರೆ ಇಲ್ಲೊಬ್ಬ ಸಹೋದರರು ದುರಾದೃಷ್ಟವಶಾತ್ ಬೇರೆಯಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಟೈಮ್ ನಲ್ಲಿಯೇ( 1947ರಲ್ಲಿ) ದೇಶ ವಿಭಜನೆ ವೇಳೆ ಬೇರ್ಪಟ್ಟವರು ಬರೋಬ್ಬರಿ 75 ವರ್ಷಗಳ ನಂತರ ಮೊದಲ ಬಾರಿಗೆ ಒಂದಾಗಿದ್ದರು. ಕಳೆದ ವರ್ಷ ನಡೆದಿದ್ದ ಈ ಭಾವನಾತ್ಮಕ ಘಟನೆಗೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದರು. ಆದರೆ ಈ ಎರಡೂ ಕುಟುಂಬದವರ ಸಂಭ್ರಮ ಹೆಚ್ಚು ಸಮಯ ಉಳಿದಿಲ್ಲ.
ಪಾಕಿಸ್ತಾನದ ಪಂಜಾಬ್ನ ಫೈಸಲಾಬಾದ್ನಲ್ಲಿ ನೆಲೆಸಿದ್ದ 85 ವರ್ಷದ ಸಾದಿಕ್ ಖಾನ್ ಹಾಗೂ ಭಾರತದ ಪಂಜಾಬ್ನ ಅಮೃತಸರದಲ್ಲಿ ನೆಲೆಸಿರುವ ಸಿಕಾ ಖಾನ್ ಅವರಿಗೆ ಜೂನ್ ತಿಂಗಳಲ್ಲಿ ವಿಡಿಯೋ ಕರೆ ಮಾಡಿ ಮಾತನಾಡಿದ್ದರು. ಈ ಮೂಲಕ ಅವರು ಒಂದಾಗಿದ್ದರು. ಕುಟುಂಬದಲ್ಲಿ ಮತ್ತೆ ಸಂತಸ ಮನೆ ಮಾಡಿತ್ತು.ಇದರ ಮಧ್ಯೆ ಕುಟುಂಬದಲ್ಲಿ ಮದುವೆಯೊಂದರ ಸಿದ್ಧತೆ ನಡೆಯುತ್ತಿದ್ದು,ಅದನ್ನು ಭಾರತದಲ್ಲಿದ್ದ ಸಿಕಾ ಖಾನ್ ಜತೆ ಹಂಚಿಕೊಂಡಿದ್ದರು. ಆದರೆ ಅದಾಗಿ ಕೆಲವೇ ದಿನಗಳಲ್ಲಿ ಸಾದಿಕ್ ಕೊನೆಯುಸಿರೆಳೆದಿದ್ದಾರೆ. ಜುಲೈ 4ರಂದು ಸಾದಿಕ್ ಮೃತಪಟ್ಟಿದ್ದು, ಅಣ್ಣ ತಮ್ಮಂದಿರು 75 ವರ್ಷದ ನಂತರ ಜತೆಗೂಡಿದ ಒಂದು ವರ್ಷದಲ್ಲಿಯೇ ವಿಧಿ ಲೀಲೆ ಮತ್ತೆ ಬೇರಾಗುವಂತೆ ಮಾಡಿದೆ.
1947ರಲ್ಲಿ ಭಾರತ ವಿಭಜನೆಯಾಗಿ ಪಾಕಿಸ್ತಾನ ಸೃಷ್ಟಿಯಾದ ವೇಳೆ ಈ ಸಹೋದರರು ಬೇರ್ಪಟ್ಟಿದ್ದರು. ಕಳೆದ ವರ್ಷದ ಜನವರಿ 10ರಂದು ಪಾಕಿಸ್ತಾನದ ಕರ್ತಾರ್ಪುರದಲ್ಲಿನ ಗುರುದ್ವಾರ ದರ್ಬಾರ್ ಸಾಹಿಬ್ನಲ್ಲಿ ಅವರು ಮೊದಲ ಬಾರಿಗೆ ಭೇಟಿಯಾಗಿದ್ದರು. ಆನಂದಬಾಷ್ಪ ಸುರಿಸುತ್ತಾ ಇಬ್ಬರೂ ವೃದ್ಧರು ಒಬ್ಬರನ್ನೊಬ್ಬರು ಅಪ್ಪಿಕೊಂಡ ಫೋಟೋ ಭಾರಿ ವೈರಲ್ ಆಗಿತ್ತು. “ನಾವು ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದೆವು. ಆತ ಸದೃಢ ಹಾಗೂ ಆರೋಗ್ಯದಿಂದ ಇರುವಂತೆ ಕಂಡಿದ್ದ. ಭಾರತಕ್ಕೆ ಬರುವಂತೆ ಆತನಿಗೆ ಹೇಳಿದ್ದೆನಾದರೂ ಬೇಸಿಗೆ ಮುಗಿಯಲಿ ಎಂದು ಅವನು ಹೇಳಿದ್ದ. ಅದೇ ನಮ್ಮ ಕೊನೆಯ ಕರೆ ಎಂದು ಊಹಿಸಿಯೂ ಇರಲಿಲ್ಲ” ಎಂದು ಸಿಕಾ ಖಾನ್ ಕಣ್ಣೀರಿಟ್ಟು ತಮ್ಮ ಅಳಲು ತೋಡಿಕೊಂಡಿದ್ದರು.
1947ರ ಬೇಸಿಗೆ ಅವಧಿಯಲ್ಲಿ ಬತಿಂಡಾದಲ್ಲಿನ ಫುಲೆವಾಲ್ನಲ್ಲಿನ ಅಜ್ಜಿಯ ಮನೆಗೆ ಸಾದಿಕ್ ಹಾಗೂ ಅವರ ತಂದೆ ತೆರಳಿದ್ದರು. ಆಗ ಸಾದಿಕ್ಗೆ ಕೇವಲ 10 ವರ್ಷ. ಸಿಕಾ ಆರು ತಿಂಗಳ ಹಸುಗೂಸು. ಅದರ ನಂತರ ಈ ಎರಡೂ ಕುಟುಂಬಗಳು ಬೇರೆ ಬೇರೆ ದೇಶಗಳಲ್ಲಿ ಉಳಿದುಕೊಳ್ಳುವಂತೆ ಆಗಿತ್ತು. ದೇಶ ವಿಭಜನೆ ವೇಳೆ ನಡೆದ ಗಲಭೆಗಳಲ್ಲಿ ಸಾದಿಕ್ ಮತ್ತು ಸಿಕಾ ಅವರ ತಂದೆ ಕೂಡ ಮಡಿದರು. ಸಾದಿಕ್ ಅವರನ್ನು ಚಿಕ್ಕಪ್ಪ ಸಾಕಿ ಸಲಹಿದರು.
ಇತ್ತ ದೇಶ ವಿಭಜನೆ ಬಳಿಕ ಸಿಕಾನ ತಾಯಿ ಆತ್ಮಹತ್ಯೆ ಮಾಡಿಕೊಂಡರು. ಕೆಲವು ವರ್ಷಗಳ ಬಳಿಕ ಸಹೋದರಿ ಕೂಡ ಮೃತಪಟ್ಟರು.ಹೀಗಾಗಿ ಸಿಕಾ ಅನಾಥರಾದರು. ಅವಿವಾಹಿತರಾಗಿಯೂ ಉಳಿದರು.ಒಂದು ದಿನ ಪಾಕಿಸ್ತಾನದ ಯೂಟ್ಯೂಬರ್ ನಾಸಿರ್ ಧಿಲ್ಲೋನ್ ಎಂಬುವವರು ಸಾದಿಕ್ನ ಸಂದರ್ಶನದ ವಿಡಿಯೋವನ್ನು 2019ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು.ಇದು ಸಹೋದರರಿಬ್ಬರನ್ನು ಒಂದಾಗುವಂತೆ ಮಾಡಿತ್ತು.
ಇದೀಗ ಸಹೋದರನ ಸಾವಿನ ಸುದ್ದಿ ಕೇಳಿ ಸಿಕಾ ಗದ್ಗದಿತರಾಗಿದ್ದಾರೆ.ನನ್ನನ್ನು ಭೇಟಿಯಾಗುತ್ತೇನೆಂದು ನನ್ನ ಸಹೋದರ ಹೇಳುತ್ತಿದ್ದ ಆದರೆ ವಿಧಿ ನಮ್ಮನ್ನು ಬೇರ್ಪಡಿಸುವಂತೆ ಮಾಡಿದೆ.ಆತನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗಲಿಲ್ಲ.ನಮ್ಮಿಬ್ಬರ ನಡುವೆ ಗಡಿ ಮತ್ತೆ ಅಡ್ಡಿಬಂದಿದೆ ಎಂದಿದ್ದಾರೆ.ಅಣ್ಣನ ಅಂತಿಮ ಪ್ರಾರ್ಥನೆ ಸಲ್ಲಿಸಲು ಮುಂದಿನ ವಾರ ಅವರು ಪಾಕಿಸ್ತಾನಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ.