ನ್ಯೂಸ್ ನಾಟೌಟ್: ಪಶ್ಚಿಮ ಘಟ್ಟದ ಸೆಕ್ಷನ್ 4 ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ, ಕಾನೂನು ಬಾಹಿರವಾಗಿ ಜೀಪುಗಳನ್ನು ಚಾಲನೆ ಮಾಡಿದ ಆರೋಪದ ಮೇಲೆ, ಸಕಲೇಶಪುರ ವಲಯ ಅರಣ್ಯ ಅಧಿಕಾರಿ 10 ಜೀಪುಗಳನ್ನು ವಶಕ್ಕೆ ಪಡೆದು 15 ಜನರ ಮೇಲೆ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.
ಶನಿವಾರ ಬೆಂಗಳೂರಿನಿಂದ ಬಂದಿದ್ದ ಒಂದು ತಂಡದಲ್ಲಿ 10 ಜೀಪುಗಳು ಮೀಸಲು ಅರಣ್ಯದೊಳಗೆ, ಬೆಟ್ಟಗಳ ಮೇಲೆ ಚಾಲನೆ ಮಾಡುತ್ತಿದ್ದಾಗ ವಲಯ ಅರಣ್ಯ ಅಧಿಕಾರಿ ಶಿಲ್ಪಾ ಹಾಗೂ ಸಿಬ್ಬಂದಿ ದಾಳಿ ಮಾಡಿ ಎಲ್ಲ ಜೀಪುಗಳನ್ನು ವಶಕ್ಕೆ ಪಡೆದಿದ್ದಾರೆ.
ಸೆಕ್ಷನ್ 4 ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿ, ಜೀಪುಗಳನ್ನು ಚಾಲನೆ ಮಾಡಿ, ಪರಿಸರ ನಾಶ ಹಾಗೂ ವನ್ಯ ಜೀವಿಗಳಿಗ ಆವಾಸ ಸ್ಥಾನಕ್ಕೆ ಧಕ್ಕೆ ಆರೋಪದ ಮೇಲೆ 15 ಜನರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಆರ್ಎಫ್ಒ ಶಿಲ್ಪಾ ತಿಳಿಸಿದ್ದಾರೆ.
ಬ್ಯಾಕರವಳ್ಳಿ ಸಮೀಪದ ರೆಸಾರ್ಟ್ಗೆ ಬಂದಿದ್ದ ತಂಡ, ನೇರವಾಗಿ ಕಾಡಿನೊಳಗೆ ಪ್ರವೇಶಿಸಿ ಗುಡ್ಡದ ಮೇಲೆಲ್ಲಾ ಜೀಪುಗಳನ್ನು ಚಲಾಯಿಸಿ, ಭೂ ಸವಕಳಿ ನಾಶ ಮಾಡಿದೆ. ಈ ಹಿಂದೆಯೂ ಇದೇ ರೀತಿ ಅಕ್ರಮ ಪ್ರವೇಶ ಮಾಡಿದ ಪ್ರವಾಸಿಗರು ಹಾಗೂ ರೆಸಾರ್ಟ್ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಆದರೂ ಪದೇ ಪದೆ ಇಂತಹ ಪ್ರಕರಣಗಳನ್ನು ಮಾಡುತ್ತಲೇ ಇದ್ದಾರೆ. ಮತ್ತೆ ಇಂತಹ ಪ್ರಕರಣಗಳು ಮರುಕಳಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರ್ಎಫ್ಒ ಶಿಲ್ಪಾ ಎಚ್ಚರಿಸಿದ್ದಾರೆ.