ಇತ್ತೀಚೆಗಷ್ಟೇ ರೀಲ್ಸ್ ಮಾಡಲೆಂದು ಹೋಗಿ ಯುವಕನೋರ್ವ ಕಾಲು ಜಾರಿ ಉಡುಪಿಯ(Udupi) ಅರಶಿನಗುಂಡಿ ಜಲಪಾತಕ್ಕೆ (Arsinagundi Falls) ಬಿದ್ದಿದ್ದ ಪ್ರಕರಣ ಇಡೀ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಎಷ್ಟೇ ಹುಡುಕಾಡಿದರೂ ಭದ್ರಾವತಿಯ ಯುವಕ ಶರತ್ ಮೃತದೇಹ ಪತ್ತೆಯಾಗಿರಲಿಲ್ಲ ಆದರೆ ನಾಪತ್ತೆಯಾದ ಪ್ರದೇಶದ 400 ಮೀಟರ್ ದೂರದಲ್ಲಿ ಇಂದು (ಜುಲೈ 30) ಮೃತದೇಹ ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತ ನೋಡಲು ಹೋಗಿ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿ ಮೂಲದ ಶರತ್ ಕುಮಾರ್ (23) ಎಂಬ ಯುವಕನ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂಬುದು ಭಾರಿ ಸುದ್ದಿಯಾಗಿತ್ತು.
ಈ ನಡುವೆ, ಮಳೆಯ ಅಬ್ಬರದ ಮಧ್ಯೆಯೂ ಯುವಕನ ಮೃತದೇಹ ಪತ್ತೆ ಮಾಡಲು ಹೋದ ಸಾಮಾಜಿಕ ಕಾರ್ಯಕರ್ತರೊಬ್ಬರು ತಾವೇ ಅಪಾಯಕ್ಕೆ ಸಿಲುಕಿ, ಪ್ರಾಣಾಪಾಯದಿಂದ ಪಾರಾಗಿ ಬಂದ ಘಟನೆಯೂ ನಡೆದಿತ್ತು. ಈಗ ಸತತ ಪ್ರಯತ್ನದ ಬಳಿಕ ಯುವಕನ ಮೃತದೇಹ ಪತ್ತೆಯಾಗಿದೆ.