ನ್ಯೂಸ್ ನಾಟೌಟ್ :ನೇಪಾಳದಲ್ಲಿ 6 ಜನರನ್ನು ಹೊತ್ತೊಯ್ದಿದ್ದ ಹೆಲಿಕಾಪ್ಟರ್ ಇಂದು ಬೆಳಗ್ಗೆ ಪತನ ಗೊಂಡಿದ್ದು,ದುರಂತದಲ್ಲಿ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಐವರು ಮೆಕ್ಸಿಕನ್ ಪ್ರವಾಸಿಗರು ಸೇರಿದಂತೆ ಆರು ಮಂದಿಯನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ನೇಪಾಳದ ಮೌಂಟ್ ಎವರೆಸ್ಟ್ ಸಮೀಪದ ಲಂಜುರಾ ಎಂಬಲ್ಲಿ ಅಪಘಾತಕ್ಕೀಡಾಗಿ ನಾಪತ್ತೆಯಾಗಿತ್ತು. ಖಾಸಗಿ ವಾಣಿಜ್ಯ ಹೆಲಿಕಾಪ್ಟರ್, ಪ್ರಯಾಣ ಆರಂಭಿಸಿದ 15 ನಿಮಿಷಗಳ ಬಳಿಕ ಸಂಪರ್ಕ ಕಳೆದುಕೊಂಡಿತ್ತು.
ಸೊಲುಖುನ್ಹು ಜಿಲ್ಲೆಯ ಸುರ್ಕೆಯಿಂದ ಹೊರಟಿದ್ದ ಈ ಹೆಲಿಕಾಪ್ಟರ್ ವಿದೇಶಿ ಪ್ರವಾಸಿಗರನ್ನು ಮೌಂಟ್ ಎವರೆಸ್ಟ್ ವೀಕ್ಷಣೆಗೆ ಕರೆದೊಯ್ದಿತ್ತು. ನಂತರ ಕಠ್ಮಂಡುವಿಗೆ ಮರಳಿ ಹೋಗುತ್ತಿತ್ತು ಎನ್ನಲಾಗಿದೆ. ಸೋಲುಖುಂಬುವಿನಲ್ಲಿ ಸುರ್ಕಿಯಿಂದ ಹೊರಟ ಮನಂಗ್ ಏರ್ ಹೆಲಿಕಾಪ್ಟರ್ ಹೊರಟು 15 ನಿಮಿಷಗಳ ನಂತರ ಸಂಪರ್ಕವಿಲ್ಲದೆ ಹೋಯಿತು ಎಂದು ಕಾಠ್ಮಂಡು ಪೋಸ್ಟ್ ವರದಿ ಮಾಡಿತ್ತು.9NMV ಕರೆ ಚಿಹ್ನೆಯೊಂದಿಗೆ ಹೆಲಿಕಾಪ್ಟರ್ ಬೆಳಗ್ಗೆ 10:೦೪ಕ್ಕೆ (ಸ್ಥಳೀಯ ಸಮಯ) ಹೊರಬಂದಿತ್ತು.
ನಾಪತ್ತೆಯಾದ ಹೆಲಿಕಾಪ್ಟರ್ಗಾಗಿ ವ್ಯಾಪಕ ಶೋಧ ನಡೆಸಲಾಗಿತ್ತು. ಇದಾದ ಕೆಲ ಗಂಟೆಗಳ ಬಳಿಕ ಭಾಕಂಜೆ ಗ್ರಾಮದ ಲಂಜುರಾದ ಚಿಹಾಂದಂಡಾ ಎಂಬಲ್ಲಿ ಹೆಲಿಕಾಪ್ಟರ್ ಅವಶೇಷಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಮೆಕ್ಸಿಕೋದ ಐವರು ಮೌಂಟ್ ಎವರೆಸ್ಟ್ ಅನ್ನು ವೈಮಾನಿಕ ವೀಕ್ಷಣೆ ನಡೆಸಲು ತೆರಳಿದ್ದರು. ಆದರೆ ಇವರ ಗುರುತುಗಳನ್ನು ಅಧಿಕಾರಿಗಳು ಇದುವರೆಗೆ ಬಹಿರಂಗಪಡಿಸಿಲ್ಲ.