ನ್ಯೂಸ್ ನಾಟೌಟ್: ದ.ಕ. ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಮನೆ ಮೇಲೆ ಗುಡ್ಡ ಕುಸಿದು ಮನೆಯೊಳಗೆ ಸಿಲುಕಿದ ತಾಯಿ ಮತ್ತು ಮಗಳಲ್ಲಿ ತಾಯಿ ಮೃತಪಟ್ಟು ಮಗಳನ್ನು ರಕ್ಷಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು ನಂದಾವರ ನಿವಾಸಿ ಝರೀನಾ(46) ಎಂದು ಗುರುತಿಸಲಾಗಿದೆ. ಭಾರಿ ಮಳೆಗೆ ಮನೆ ಸಮೀಪದ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿತ್ತು. ಈ ಸಂದರ್ಭ ಮನೆಯೊಳಗಿದ್ದ ಝರೀನಾ (46) ಮತ್ತು ಶಫಾ(20) ಮಣ್ಣಿನೊಳಗೆ ಸಿಲುಕಿದ್ದರು. ತಕ್ಷಣ ಬಂಟ್ವಾಳ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರ ಕಾರ್ಯಾಚರಣೆ ನಡೆಸಿ ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಅಷ್ಟರಲ್ಲೇ ಝರೀನಾ ಮಣ್ಣಿನಡಿಗೆ ಸಿಲುಕಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಹೊರತೆಗೆಯಲಾಯಿತು.
ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಮೃತಪಟ್ಟ ಐದನೇ ಪ್ರಕರಣ ಇದಾಗಿದೆ.