ನ್ಯೂಸ್ ನಾಟೌಟ್: ದಿಢೀರ್ ಆಗಿ ಬಿಎಂಟಿಸಿ ಬಸ್ನ ಚಾಲಕನೋರ್ವ ಅಸ್ವಸ್ಥಗೊಂಡು ನಡುರಸ್ತೆಯಲ್ಲಿ ಬಸ್ಸನ್ನು ನಿಲ್ಲಿಸಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಈ ವೇಳೆಗೆ ಸಹಾಯಕ ಪೊಲೀಸ್ ಕಮಿಷನರ್(ಎಸಿಪಿ) ರಾಮಚಂದ್ರಪ್ಪ ನೆರವಿಗೆ ಧಾವಿಸಿ 1 ಕಿ.ಮೀ.ವರೆಗೆ ಬಸ್ ಚಲಾಯಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.
ಬಿಎಂಟಿಸಿ ಚಾಲಕನನ್ನು ಗೋಪಿ ಎಂದು ಗುರುತಿಸಲಾಗಿದ್ದು, ಸೋಮವಾರ ಶಿವಾಜಿನಗರ-ಕಾಡುಗೋಡಿ ಮಾರ್ಗವಾಗಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಚಾಲಕ ಮಾರ್ಗ ಮಧ್ಯೆದಲ್ಲಿಯೇ ಅಸ್ವಸ್ಥಗೊಂಡು ಬಸ್ ಚಾಲನೆ ಮಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ಹೀಗಾಗಿ ಚಾಲಕ ಓಲ್ಡ್ ಏರ್ಪೋರ್ಟ್ ಕಮಾಂಡ್ ಆಸ್ಪತ್ರೆ ಬಳಿ ಬಸ್ ನಿಲ್ಲಿಸಿದ್ದ. ಎರಡು ದಿನಗಳ ವಿರೋಧ ಪಕ್ಷಗಳ ನಾಯಕರ ಸಭೆ ಹಿನ್ನೆಲೆ ನಗರಕ್ಕೆ ವಿವಿಐಪಿಗಳ ಆಗಮನ ಹಿನ್ನೆಲೆ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ಎಸಿಪಿ ರಾಮಚಂದ್ರಪ್ಪ ಅವರು ಭದ್ರತೆಗೆ ನಿಯೋಜನೆಗೊಂಡಿದ್ದರು.
ಈ ವೇಳೆ ರಸ್ತೆ ಮಧ್ಯೆ ನಿಂತಿದ್ದ ಬಿಎಂಟಿಸಿ ಬಸ್ ಗಮನಿಸಿದ ರಾಮಚಂದ್ರಪ್ಪ, ಚಾಲಕನನ್ನು ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕಳುಹಿಸಿ, ಬಳಿಕ ಬಸ್ಸನ್ನು ಸುಮಾರು ಒಂದು ಕಿ.ಮೀ. ದೂರದ ಬಸ್ ನಿಲ್ದಾಣದವರೆಗೆ ಸ್ವತಃ ಚಾಲನೆ ಮಾಡಿಕೊಂಡಿ ಹೋಗಿದ್ದಾರೆ.
ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಎಸಿಪಿ ರಾಮಚಂದ್ರಪ್ಪ ಅವರು ಬಸ್ ಚಲಾಯಿಸುವ ವಿಡಿಯೋ ಮಾಡಿದ್ದಾರೆ. ನಂತರ ಅದನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಧಿಕಾರಿಯ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
‘330’ ಮಾರ್ಗದಲ್ಲಿ ಕಾಡುಗೋಡಿ ಮತ್ತು ಶಿವಾಜಿನಗರ ನಡುವೆ ಬಸ್ ಓಡಿಸುತ್ತಿದ್ದಾಗ, ಮಧ್ಯಾಹ್ನ 12ರ ಸುಮಾರಿಗೆ ಕಮಾಂಡ್ ಆಸ್ಪತ್ರೆ ಬಳಿ ಅಸ್ವಸ್ಥರಾಗಿದ್ದರು. ಸದ್ಯ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.