ನ್ಯೂಸ್ ನಾಟೌಟ್: ಮಂಗಳೂರಿನ ಉಳ್ಳಾಲದಲ್ಲಿ ಇಂದು ಮುಂಜಾನೆ ವೇಳೆ ಬಡಿದ ಭಾರೀ ಸಿಡಿಲಿಗೆ ರಾಣಿಪುರದಲ್ಲಿ ದಿನಸಿ ಅಂಗಡಿಯೊಂದು ಸುಟ್ಟು ಭಸ್ಮವಾಗಿದೆ. ಕಟ್ಟಡದಲ್ಲೇ ಇದ್ದ ಮನೆಗೂ ಬೆಂಕಿ ವ್ಯಾಪಿಸಿದ್ದು ಸ್ಥಳಕ್ಕೆ ತಕ್ಷಣ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನ ನಂದಿಸಿದ್ದಾರೆ.
ಮುನ್ನೂರು ಗ್ರಾಮದ ರಾಣಿಪುರ ಚರ್ಚ್ ಎದುರಿನ ಪೀಟರ್ ಆಪೊಸು ಎಂಬುವರ ಜಿನಸಿ ಅಂಗಡಿಗೆ ಸಿಡಿಲು ಬಡಿದು ಭಸ್ಮವಾಗಿದೆ.ಇಂದು ಮುಂಜಾನೆ ನಸುಕಿನ ವೇಳೆ ಸಿಡಿಲು ಬಡಿದು ಘಟನೆ ಸಂಭವಿಸಿದೆ. ಘಟನೆ ವೇಳೆ ಪೀಟರ್ ತನ್ನ ಪತ್ನಿ ಅಸುಂತ ಮರಿಯ ಡಿಕ್ರೂಜ್ ಮತ್ತು ಮಗ ಪ್ರೀತಮ್ ಜೊತೆ ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದರು. ರಸ್ತೆ ಹೋಕರೊಬ್ಬರು ಅಂಗಡಿಗೆ ಬೆಂಕಿ ಬಿದ್ದಿರುವುದನ್ನ ಕಂಡು ಮನೆ ಮಂದಿಗೆ ತಿಳಿಸಿದ್ದಾರೆ.ತಕ್ಷಣ ಎಚ್ಚೆತ್ತ ಪೀಟರ್ ಕುಟುಂಬ ಅಗ್ನಿ ಶಾಮಕದಳಕ್ಕೆ ಕರೆಮಾಡಿದ್ದು ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿಗಳು ಮನೆಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನ ನಂದಿಸಿದ್ದಾರೆ.
ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಜಿನಸಿ ದಾಸ್ತಾನು ಸುಟ್ಟು ಕರಕಲಾಗಿದ್ದು ಮೂರು ರೆಫ್ರಿಜರೇಟರ್ ಸುಟ್ಟಿವೆ. ಎಲೆಕ್ಟ್ರಾನಿಕ್ ಉಪಕರಣಗಳು ಕೆಟ್ಟು ಹೋಗಿವೆ.ಅಂಗಡಿ,ಮನೆ ಒಟ್ಟಿಗೆ ಇದ್ದು ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ. ಸ್ಥಳಕ್ಕೆ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಮಾಜಿ ಉಪಾಧ್ಯಕ್ಷ ನವೀನ್ ಡಿಸೋಜಾ,ಕಂದಾಯ ನಿರೀಕ್ಷಕರು,ಗ್ರಾಮಲೆಕ್ಕಾಧಿಕಾರಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.