ನ್ಯೂಸ್ ನಾಟೌಟ್: ರಾಜ್ಯದ ಕೆಲವು ಕಡೆಯಿಂದ ಕೊಳೆತ ಮೊಟ್ಟೆ ಪೂರೈಕೆಯಾಗಿದ್ದ ಬಗ್ಗೆ ವರದಿಯಾಗಿತ್ತು. ಇದೀಗ ಮಂಗಳೂರಿನಲ್ಲೂ ಅಂಗನವಾಡಿ ಮಕ್ಕಳಿಗೆ ಪೂರೈಸಲಾಗಿರುವ ಮೊಟ್ಟೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಬಿಜಾಪುರ ಮೂಲದ ಬಸವೇಶ್ವರ ಹೆಸರಿನ ಕೋಳಿ ಮೊಟ್ಟೆ ಪೂರೈಸುವ ಕಂಪನಿಗೆ ಸರ್ಕಾರ ಮೊಟ್ಟೆ ಪೂರೈಸುವ ಗುತ್ತಿಗೆ ನೀಡಿದೆ. ಅಂತೆಯೇ ಮಂಗಳೂರಿನ ಹಲವು ಕಡೆಯೂ ಮೊಟ್ಟೆಯನ್ನು ಅಂಗನವಾಡಿಗಳಿಗೆ ಪೂರೈಕೆ ಮಾಡಲಾಗಿತ್ತು. ಇದೀಗ ಮಂಗಳೂರಿನ ವಿವಿಧ ಭಾಗಗಳಿಂದ ಕೊಳೆತ ಮೊಟ್ಟೆ ಪೂರೈಕೆಯಾಗಿದೆ ಅನ್ನುವಂತಹ ಆರೋಪಗಳು ಕೇಳಿ ಬಂದಿವೆ.
ಮೊಟ್ಟೆಯನ್ನು ಅಂಗನವಾಡಿ ಕೇಂದ್ರಗಳಿಂದ ಗರ್ಭಿಣಿಯರು, ಬಾಣಂತಿಯರು, ಪುಟ್ಟ ಮಕ್ಕಳ ಪೋಷಕರು ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ನೀರಿನಲ್ಲಿಟ್ಟು ಬೇಯಿಸಿ ಸಿಪ್ಪೆಯನ್ನು ಸುಲಿದು ಒಳಗೆ ನೋಡಿದಾಗ ಕೊಳೆತ ಸ್ಥಿತಿಯಲ್ಲಿದ್ದ ಮೊಟ್ಟೆಯನ್ನು ಕಂಡು ಕುಟುಂಬಸ್ಥರ ಪಿತ್ತ ನೆತ್ತಿಗೇರಿದೆ. ನೇರವಾಗಿ ಅದನ್ನು ತೆಗೆದುಕೊಂಡು ಅಂಗನವಾಡಿ ಶಿಕ್ಷಕಿಯರಲ್ಲಿ ತಂದು ತೋರಿಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ ಘಟನೆಯೂ ಮಂಗಳೂರಿನಲ್ಲಿ ನಡೆದಿದೆ.
ಎರಡು ತಿಂಗಳು ಮೊಟ್ಟೆ ಸಂಗ್ರಹಿಸಿಟ್ಟು ಹಾಳಾದ ಬಳಿಕ ಪೂರೈಕೆ ಮಾಡಿದ್ರಾ ಗುತ್ತಿಗೆದಾರ ಅನ್ನುವಂತಹ ಅನುಮಾನಗಳು ವ್ಯಕ್ತವಾಗುತ್ತಿವೆ. ವಾರದ ಹಿಂದೆ ಹಾಸನದಲ್ಲಿ ಬೆಳಕಿಗೆ ಬಂದಿದ್ದ ಅಂಗನವಾಡಿಯ ಕೊಳೆತ ಮೊಟ್ಟೆ ಪ್ರಕರಣ ರಾಜ್ಯದ ಬೇರೆ ಬೇರೆ ಕಡೆಯಿಂದಲೂ ವರದಿಯಾಗಿತ್ತು. ಕೊಳೆತ ಮೊಟ್ಟೆ ಪೂರೈಕೆ ಬಗ್ಗೆ ಶಿಕ್ಷಕಿಯರು ಅಲವತ್ತುಕೊಂಡರೂ ಆಡಳಿತದ ನಿರ್ಲಕ್ಷ್ಯ ದ ದೂರು ಕೇಳಿ ಬರುತ್ತಿದೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇರವಾಗಿ ಹೊಣೆ ಎಂದು ಆರೋಪಿಸಲಾಗಿದೆ. ಗುತ್ತಿಗೆದಾರನ ಬ್ಲಾಕ್ ಲಿಸ್ಟ್ ಹಾಕ್ತೀನಿ ಎಂದು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಹಿಂದೆ ಗುಡುಗಿದ್ದರು. ಮುಂದೆ ಅವರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಅನ್ನುವುದನ್ನು ಕಾದು ನೋಡಬೇಕಿದೆ.