ನ್ಯೂಸ್ ನಾಟೌಟ್: ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರನ್ನೇ ಬಿಟ್ಟು ವಿಮಾನ ಹಾರಿದ ಘಟನೆ ನಡೆದಿದೆ. ಜುಲೈ ೨೭ರಂದು ಘಟನೆ ನಡೆದಿದೆ. ಬೆಂಗಳೂರಿನಿಂದ(Bengaluru) ಹೈದರಾಬಾದ್ಗೆ (Hyderabad) ತೆರಳಬೇಕಿದ್ದ ರಾಜ್ಯಪಾಲರು, ಸಿಬ್ಬಂದಿ ನಿರ್ಲಕ್ಷ್ಯದಿಂದ ವಿಮಾನವನ್ನು ಮಿಸ್ ಮಾಡಿಕೊಂಡಿದ್ದಾರೆ.
ಥಾವರ್ ಚಂದ್ ಗೆಹ್ಲೋಟ್ ಅವರು ಹೈದರಾಬಾದ್ಗೆ ತೆರಳು ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Bangalore Kempegowda internationalairport) ಬಂದಿದ್ದರು, ಆದ್ರೆ, ಇನ್ನೂ ಏರ್ ಏಷ್ಯಾ ವಿಮಾನ ಹೊರಡಲು ಸಮಯ ಇದೆ ಎಂದು ಸಿಬ್ಬಂದಿ ರಾಜ್ಯಪಾಲರನ್ನು ಕರೆದುಕೊಂಡು ಹೋಗಿ ವಿಐಪಿ ಲಾಂಜ್ನಲ್ಲಿ ಕೂರಿಸಿದ್ದು, ಟೈಮ್ ಆಗಿರುವುದು ಅವರ ಗಮನಕ್ಕೆ ಬಂದಿಲ್ಲ. ಇದರಿಂದ ವಿಮಾನ ಸರಿಯಾದ ಸಮಯಕ್ಕೆ ಟೇಕಫ್ ಆಗಿ ಹೋಗಿದೆ.
ಬಳಿಕ ಫ್ಲೈಟ್ ಸಮಯವಾಗಿರುವುದು ಗಮನಕ್ಕೆ ಬಂದ ಕೂಡಲೇ ರಾಜ್ಯಪಾಲರು ವಿಮಾನ ಹತ್ತಲು ಹೋಗಿದ್ದಾರೆ. ಆದ್ರೆ, ಅಷ್ಟರಲ್ಲಾಗಲೇ ವಿಮಾನ ಹೋಗಿತ್ತು. ಪ್ರೋಟೋಕಾಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಮಾನ ತಪ್ಪಿದೆ. ಬಳಿಕ ಅಧಿಕಾರಿಗಳು ಮತ್ತೊಂದು ವಿಮಾನದ ಮೂಲಕ ಅವರನ್ನು ಹೈದರಾಬಾದ್ಗೆ ಕಳುಹಿಸಿಕೊಟ್ಟಿದ್ದಾರೆ. ಸಿಬ್ಬಂದಿ ನಿರ್ಲಕ್ಷ್ಯತನದಿಂದ ರಾಜ್ಯಪಾಲರು ಒಂದು ಗಂಟೆ ತಡವಾಗಿ ಹೈದರಾಬಾದ್ಗೆ ತೆರಳಬೇಕಾಯ್ತು.
ಮಧ್ಯಾಹ್ನ 02 ಗಂಟೆಯ ವಿಮಾನದಲ್ಲಿ ಹೋಗಲು ನಿಲ್ದಾಣಕ್ಕೆ 1:30ಕ್ಕೆ ಆಗಮಿಸಿದ್ದರು. ಸಿಬ್ಬಂದಿ ವಿಮಾನದಲ್ಲಿ ಲಗೇಜ್ ಇಟ್ಟು ಬಂದಿದ್ದರು. ಆದ್ರೆ, ಟೈಮ್ ಇದೆ ಎಂದು ಪ್ರೋಟೋಕಾಲ್ ಸಿಬ್ಬಂದಿ ರಾಜ್ಯಪಾಲರನ್ನು ವಿಐಪಿ ಲಾಂಜ್ ನಲ್ಲಿ ಕೂರಿಸಿದ್ದಾರೆ. ಇತ್ತ ಸಮಯವಾಗಿದ್ದರಿಂದ ವಿಮಾನ ಟೇಕಫ್ ಆಗಿ ಹೋಗಿದೆ. ಒಂದು ನಿಮಿಷ ತಡವಾಗಿ ಬಂದಿದ್ದಕ್ಕೆ ಗರ್ವನರ್ಗೆ ವಿಮಾನ ಮಿಸ್ ಆಗಿದೆ. ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ರಾಜ್ಯಪಾಲರು ಹಾಗೂ ಹಿರಿಯ ಅಧಿಕಾರಿಗಳು ಗರಂ ಆಗಿದ್ದು, ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಏರ್ಪೋರ್ಟ್ನಲ್ಲಿ ರಾಜ್ಯಪಾಲರಿಗೆ ವಿಮಾನ ಮಿಸ್ ಆದ ಹಿನ್ನೆಲೆಯಲ್ಲಿ ಶಿಷ್ಟಾಚಾರ ಅಧಿಕಾರಿಗಳು ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಏರ್ ಏಷ್ಯಾ ಏರ್ಲೈನ್ಸ್ ದೂರು ನೀಡಿದ್ದಾರೆ. ವಿಮಾನ ಮಿಸ್ ಆಗಲು ಕಾರಣ ಜೊತೆಗೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ಆಧರಿಸಿ ಏರ್ಪೋರ್ಟ್ ಪೊಲೀಸರು ಇಂದು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆಗಳಿವೆ.