ನ್ಯೂಸ್ ನಾಟೌಟ್ : ಇತ್ತೀಚೆಗಷ್ಟೆ ಆ್ಯಪಲ್ ಸ್ಟೋರ್ ಹಲವು ಸಾಲ ನೀಡುವ ಆ್ಯಪ್ ಗಳನ್ನು ಬ್ಯಾನ್ ಮಾಡಿತ್ತು. ಹಾಗೆಯೇ ಸಾಲ ನೀಡುವ ಆ್ಯಪ್ಗಳ (Loan App) ವಿರುದ್ಧ ಸಾಕಷ್ಟು ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಲೋನ್ ಆ್ಯಪ್ ಟಾರ್ಚರ್ ತಾಳಲಾರದೆ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ಇಂದು(ಜುಲೈ 12) ನಡೆದಿದೆ.
22 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ತೇಜಸ್ ಮೃತ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ತೇಜಸ್, ಸ್ಲೈಲ್ಸ್ ಪೈ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮನಿ ಲೆಂಡಿಂಗ್ ಮೂಲಕ ಸಾಲ ಪಡೆದಿದ್ದ ಎಂದು ವರದಿ ತಿಳಿಸಿದೆ.
ಲೋನ್ ಆ್ಯಪ್ನಲ್ಲಿ ತೇಜಸ್ ಸಾಲ ಪಡೆದು ಆ ಹಣವನ್ನು ಸ್ನೇಹಿತ ಮಹೇಶ್ ಎಂಬುವರಿಗೆ ಸಾಲವಾಗಿ ನೀಡಿದ್ದಾನೆ ಎಂದು ಹೇಳಲಾಗಿದೆ. ಆದರೆ ಮಹೇಶ್ ಇಎಂಐ ಕಟ್ಟಿರಲಿಲ್ಲ. ಲೋನ್ ಕೊಟ್ಟಿದ್ದ ಆ್ಯಪ್ ನವರು ಟಾರ್ಚರ್ ನೀಡಿದ ಹಿನ್ನೆಲೆಯಲ್ಲಿ ತೇಜಸ್ ಡೆತ್ ನೋಟ್ ಬರೆದಿಟ್ಟು ಮಂಗಳವಾರ ಸಂಜೆ (ಜುಲೈ 11) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಲದ ಆ್ಯಪ್ಗಳ ಚಿತ್ರಹಿಂಸೆಯಿಂದಲೇ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ತೇಜಸ್ ಅವರ ತಂದೆ ಗೋಪಿನಾಥ್ ಆರೋಪಿಸಿದ್ದಾರೆ ಎನ್ನಲಾಗಿದೆ.