ನ್ಯೂಸ್ ನಾಟೌಟ್: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಯ ನೋಂದಣಿಗೆ ಇಪ್ಪತ್ತು ರೂಪಾಯಿ ಪಡೆಯಬೇಕಾಗಿದ್ದ ಪಡುಬಿದ್ರಿ ಸೈಬರ್ ವೊಂದರಲ್ಲಿ 100 ರೂಪಾಯಿ ಪಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಈ ವಿಷಯ ಗೊತ್ತಾದ ಬಳಿಕ ಗ್ರಾಮ ಪಂಚಾಯತ್ ಸದಸ್ಯರು ಸೈಬರ್ ಸೆಂಟರ್ಗೆ ತೆರಳಿ ಸೈಬರ್ ಸೆಂಟರ್ ಮಾಲೀಕನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ತಹಶೀಲ್ದಾರ್ ಮತ್ತು ಪಂಚಾಯತ್ಗೆ ದೂರು ನೀಡಿದ್ದಾರೆ.
ಗ್ರಾಪಂ ಸದಸ್ಯರ ದೂರಿನನ್ವಯ ಕಾಪು ತಹಶೀಲ್ದಾರ್ ಜನರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಸೈಬರ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪಡುಬಿದ್ರಿ ಗ್ರಾ.ಪಂ. ಸದಸ್ಯೆ ಜ್ಯೋತಿ ಮೆನನ್, ಸರ್ಕಾರದ ಬಡವರ “ಗೃಹಜ್ಯೋತಿ” ಯೋಜನೆಯನ್ನು ದುರುಪಯೋಗ ಮಾಡಿಕೊಂಡ ಪಡುಬಿದ್ರಿಯ ಗ್ರಾ.ಪಂ. ಮುಂಭಾಗದ ಸ್ಟಾರ್ ಸೈನ್ ಹೆಸರಿನ ಸೈಬರ್ ಸೆಂಟರ್ನಲ್ಲಿ ಇಪ್ಪತ್ತು ರೂಪಾಯಿ ಪಡೆಯುವಲ್ಲಿ ಜನಸಾಮಾನ್ಯರಿಂದ ನೂರು ರೂಪಾಯಿಗಳಂತೆ ವಸೂಲಿ ಮಾಡುತ್ತಿದ್ದಾರೆ. ಇದು ಸ್ವತಃ ನಮ್ಮ ಗ್ರಾ.ಪಂ. ಸದಸ್ಯ ಶಫಿಯವರ ಗಮನಕ್ಕೆ ಬಂದಿದೆ. ಈ ರೀತಿ ವಸೂಲಿ ಮಾಡುತ್ತಿರುವವರ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪಂಚಾಯತ್ ಮತ್ತು ತಹಶೀಲ್ದಾರ್ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸೈಬರ್ ಸೆಂಟರ್ಗೆ ಪಡುಬಿದ್ರಿ ಪೊಲೀಸರು ಆಗಮಿಸಿ ವಿಚಾರಿಸಿದ್ದು, ಕಾಪು ತಹಶೀಲ್ದಾರ್ ಗಮನಕ್ಕೆ ತಂದಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ಸೈಬರ್ ಮಾಲಿಕ ಇಮ್ತಿಯಾಜ್ ಮೊದಲಿಗೆ ತಾನು ಮಾಡಿದ ಅಪರಾಧವನ್ನು ಸಮರ್ಥಿಸಿ ಬಜ್ಪೆಯಲ್ಲಿ ನೂರು ರೂಪಾಯಿ ಇದೆ. ಆದ್ದರಿಂದ ನಾನು ನೂರು ರೂಪಾಯಿ ತೆಗೆದುಕೊಳ್ಳುತ್ತೇನೆ ಎಂದು ಉದ್ಧಟತನದಿಂದ ಪ್ರತಿಕ್ರಿಯಿಸಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ಆಗಮಿಸಿದ ಬಳಿಕ ಜತೆಗೆ ತಹಶೀಲ್ದಾರ್ ಕಾನೂನು ಕ್ರಮದ ಬಗ್ಗೆ ತಿಳಿಯುತ್ತಿದಂತೆ ಸೈಬರ್ ಸೆಂಟರ್ ಮಾಲೀಕ ದರ ಕಡಿತ ಗೊಳಿಸುವುದಾಗಿ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಇಲ್ಲಿಯವರೆಗೆ ಬಡಜನರಿಂದ ಹೆಚ್ಚುವರಿಯಾಗಿ ಪಡೆದ ಮೊತ್ತಕ್ಕೆ ಏನು ಪರಿಹಾರ ಎಂಬುದು ತಹಶೀಲ್ದಾರ್ ತನಿಖೆ ಬಳಿಕವಷ್ಟೇ ಇತ್ಯಾರ್ಥವಾಗಲಿದೆ.