ನ್ಯೂಸ್ ನಾಟೌಟ್ : ಹಿಮಾಚಲ ಪ್ರದೇಶದಾದ್ಯಂತ ಭೀಕರ ಮಳೆ ಸುರಿಯುತ್ತಿದ್ದು, ರಸ್ತೆಗಳೆಲ್ಲ ಬ್ಲಾಕ್ ಆಗಿವೆ. ಹಲವರ ಪ್ರಾಣವೂ ಹೋಗಿದೆ. ಇದೆಲ್ಲದರ ಮಧ್ಯೆ ಹಿಮಾಚಲ ಪ್ರದೇಶದಲ್ಲಿ ನಡೆದ ಮದುವೆಯೊಂದು ಭಾರೀ ಸುದ್ದಿಯಾಗಿದೆ.
ಶಿಮ್ಲಾದ ಆಶಿಶ್ ಸಿಂಘಾ ಎಂಬ ವರನಿಗೂ, ಕಲ್ಲುವಿನ ಭಂಟರ್ ನಿವಾಸಿ ಶಿವಾನಿ ಠಾಕೂರ್ ಎಂಬ ವಧುವಿಗೂ ವಿಡಿಯೊ ಕಾನ್ಫರೆನ್ಸ್ನಲ್ಲಿ, ಆನ್ಲೈನ್ನಲ್ಲಿ ಮದುವೆ ಮಾಡಲಾಗಿದೆ. ಇಂದು(ಜುಲೈ ೧೨) ಮದುವೆ ನಿಗದಿಯಾಗಿತ್ತು.
ವರ ಆಶಿಶ್ ಸಿಂಘಾ ಅವರು ಸೋಮವಾರ ಮೆರವಣಿಗೆ ಮೂಲಕ ವಧುವಿನ ಮನೆ ಇರುವ ಭಂಟರ್ ಗೆ ತೆರಳಬೇಕಿತ್ತು. ಆದರೆ ಕುಲ್ಲು ಜಿಲ್ಲೆ ಭೀಕರ ಮಳೆಯಿಂದಾಗಿ ಸಂಪೂರ್ಣ ವಿನಾಶಕ್ಕೀಡಾಗುತ್ತಿದೆ. ಜನರು ಮನೆ ಬಿಟ್ಟು ರಸ್ತೆಗೆ ಇಳಿಯದ ಸ್ಥಿತಿ ಉಂಟಾಗಿದೆ. ವಧುವಿನ ಮನೆಗೆ ತೆರಳಲಾಗದೆ ವರ ಒದ್ದಾಡಿ ಪ್ರಯತ್ನ ವಿಫಲವಾಗಿತ್ತು.
ಹೀಗಾಗಿ ವರನಿಗೆ ವಧುವಿನ ಮನೆಗೆ ಬರಲು ಸಾಧ್ಯವಾಗಲಿಲ್ಲ. ಇಟ್ಟ ಮುಹೂರ್ತ ತಪ್ಪಿಸಬಾರದು ಎಂಬ ಕಾರಣಕ್ಕೆ ಎರಡೂ ಕುಟುಂಬದವರು ಸೇರಿ ಆನ್ಲೈನ್ನಲ್ಲಿಯೇ ಮದುವೆ ಮಾಡಿಸಿದ್ದಾರೆ. ವರ ತಮ್ಮ ಮನೆಯಲ್ಲೇ ಕುಳಿತಿದ್ದ, ವಧು ಆಕೆಯ ಮನೆಯಲ್ಲೇ ಇದ್ದಳು. ಇವರಿಬ್ಬರೂ ವಿಡಿಯೊ ಕಾನ್ಫರೆನ್ಸ್ ಮೂಲಕ ಪರಸ್ಪರ ಮುಖ ನೋಡಿಕೊಂಡು-ಮದುವೆಯಾಗಿದ್ದಾರೆ.
ಈ ಮದುವೆಯಲ್ಲಿ ಮಾಜಿ ಶಾಸಕ ರಾಕೇಶ್ ಸಿಂಗ್ ಅವರೂ ವರನ ಕಡೆಯಿಂದ ಪಾಲ್ಗೊಂಡಿದ್ದರು. ವರ್ಚ್ಯುವಲ್ ಮದುವೆಗಳು 2020-2021ರಲ್ಲಿ ಕೊವಿಡ್ 19 ಸಾಂಕ್ರಾಮಿಕ ಇದ್ದ ಕಾಲದಲ್ಲಿ ಐದಾರು ಕಡೆ ಹೀಗೆ ಆನ್ಲೈನ್ ಮದುವೆ ನಡೆದಿತ್ತು. ಈಗ ಮಳೆಯಿಂದಾಗಿ ಈ ಮದುವೆ ಸುದ್ದಿಯಾಗಿದೆ.