ನ್ಯೂಸ್ ನಾಟೌಟ್: ಬಹಳ ಅಪರೂಪವಾಗಿ ಸಿಗುವ ಪುಲಸ ಮೀನಿಗೆ ಅಪಾರವಾದ ಬೇಡಿಕೆಯನ್ನು ಇದ್ದು, ಈ ಬಾರಿಯ ಪುಲಸ ಮೀನು ಆಂಧ್ರಪ್ರದೇಶದಲ್ಲಿ 20 ಸಾವಿರಕ್ಕಿಂತಲೂ ಅಧಿಕ ರೂಪಾಯಿಗೆ ಮಾರಾಟವಾಗಿದೆ.
ಆಂಧ್ರಪ್ರದೇಶದಲ್ಲಿ ಅತ್ಯಂತ ವಿರಳವಾಗಿ ಸಿಗುವ ಹಾಗೂ ಪರಿಮಳಯುಕ್ತ ಮೀನು ಇದಾಗಿದ್ದು, ಚೇಪಾಲ ಪುಲುಸು ಎನ್ನುವ ಮೀನಿನ ಖಾದ್ಯದಿಂದಲೇ ಈ ಮೀನಿಗೆ ಪುಲಸ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತಿದೆ. ಚೇಪಾಲ ಪುಲುಸು ಎಂದರೆ ಮೀನು ಸಾರು ಎಂದರ್ಥ. ತನ್ನ ವಿಶೇಷ ರುಚಿಯಿಂದಾಗಿ ಇಡೀ ಆಂಧ್ರದಲ್ಲಿ ಇದು ಖ್ಯಾತಿ ಗಳಿಸಿದೆ.
ಪುಲಸ ಮೀನು ಆಂಧ್ರಪ್ರದೇಶದಲ್ಲಿ ಎಷ್ಟು ಫೇಮಸ್ ಎಂದರೆ, ಈ ಮೀನು ಸಿಗುವ ಋತುವಿನ ಮುಂಚಿತವಾಗಿಯೇ ಗ್ರಾಹಕರು ಮೀನುಗಾರರಿಗೆ ಮೀನಿಗಾಗಿ ಮುಂಗಡ ಹಣ ಪಾವತಿಸುತ್ತಾರೆ. ಇದರಿಂದಲೇ ಈ ಮೀನು ಎಷ್ಟು ಫೇಮಸ್ ಎನ್ನುವುದು ನೀವು ತಿಳಿಯಬಹುದು. ಆಂಧ್ರದ ಕರಾವಳಿ ಪ್ರದೇಶದ ಕುಟುಂಬಗಳು ಚೇಪಾಲ ಪುಲುಸುವನ್ನು ರಾಜ ಭಕ್ಷ್ಯವೆಂದು ಪರಿಗಣಿಸುವುದು ಮಾತ್ರವಲ್ಲ, ಹಾಗೇನಾದರೂ ಮೀನುಗಾರಿಕೆಗೆ ಹೋದಾದ ಈ ಮೀನು ಸಿಕ್ಕಲ್ಲಿ ಅದನ್ನು ಊರಿನ ಪ್ರಭಾವಿ ಜನರಿಗೆ ಉಡುಗೊರೆಯಾಗಿ ನೀಡುತ್ತಾರೆ.
ಜುಲೈನಿಂದ ಸೆಪ್ಟೆಂಬರ್ ಆರಂಭದವರೆಗೆ ಗೋದಾವರಿ ಪ್ರದೇಶದಲ್ಲಿ ಮಾತ್ರ ಮೀನುಗಳು ವಿರಳವಾಗಿ ಕಂಡುಬರುತ್ತವೆ. ‘ಹಿಲ್ಸಾ’ ಎಂದೂ ಕರೆಯಲ್ಪಡುವ ಈ ಮೀನುಗಳು ಮಳೆಗಾಲದಲ್ಲಿ ಸಂತಾನೋತ್ಪತ್ತಿಗಾಗಿ ನದಿಮುಖಜಗಳಿಗೆ ವಲಸೆ ಹೋಗುತ್ತವೆ. ಸಂತಾನೋತ್ಪತ್ತಿ ಅವಧಿಯ ನಂತರ ಪುಲಸ ಮೀನುಗಳು ಸಾಯುತ್ತವೆ. ಆದ್ದರಿಂದ ಸೂಕ್ತವಾದ ಸಮಯದಲ್ಲಿ ಮೀನುಗಳನ್ನು ಹಿಡಿಯಬೇಕು. ಮೀನು ಉಪ್ಪುನೀರಿನಿಂದ ಸಿಹಿನೀರಿಗೆ ಚಲಿಸುವಾಗ ಬದಲಾವಣೆಗಳಿಗೆ ಒಳಗಾಗುತ್ತದೆ.
ಆಗ ಮೀನು ತನ್ನ ಪರಿಮಳವನ್ನು ಹೆಚ್ಚಿಸಿಕೊಳ್ಳುತ್ತದೆ. ಗೋದಾವರಿ ಪ್ರದೇಶದ ಸ್ಥಳೀಯ ಮಾರುಕಟ್ಟೆಗಳಲ್ಲಿ ಒಂದು ಕಿಲೋಗ್ರಾಂ ಮೀನು 4000 ರೂ.ಗೆ ಮಾರಾಟವಾಗುತ್ತದೆ. ಆಗಾಗ ಈ ಮೀನುಗಳನ್ನು ಹರಾಜು ಹಾಕಲಾಗುತ್ತದೆ. ಇತ್ತೀಚಿಗೆ ಈ ಒಂದು ಮೀನು 20 ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟವಾಗಿದೆ. ಲಭ್ಯತೆ, ರುಚಿ ಮತ್ತು ಜನಪ್ರಿಯತೆಯಿಂದಾಗಿ ಗೋದಾವರಿ ಪುಲಸವು ದುಬಾರಿಯಾಗಿದೆ ಎನ್ನಲಾಗಿದೆ.