ನ್ಯೂಸ್ ನಾಟೌಟ್: ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಗೆದ್ದು ಬೀಗಿದ ದಿ ಎಲೆಫೆಂಟ್ ವಿಸ್ಪರರ್ಸ್(The Elephant Whisperers) ಸಿನಿಮಾವನ್ನು ನೋಡಿ ಆನೆ ಹಾಗೂ ಮನುಷ್ಯರ ನಡುವಿನ ಬಾಂಧವ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಇದೇ ಮಾದರಿಯ ಮನಮಿಡಿಯುವ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದ ರಾಮಪುರ ಆನೆ ಶಿಬಿರದಲ್ಲಿ ನಡೆದಿದೆ.
ಹೆತ್ತ ತಾಯಿಯಿಂದ ಬೇರೆಯಾದ ಮರಿ ಆನೆಗೆ ಕಾವಡಿ ಕುಟುಂಬವೊಂದು ತಂದೆ ತಾಯಿಯಂತೆ ಪೋಷಣೆ ಮಾಡುತ್ತಿದೆ. ಆನೆ ಮರಿ ಹುಟ್ಟಿದ ಏಳೇ ದಿನಕ್ಕೆ ತಾಯಿಯಿಂದ ಬೇರ್ಪಟ್ಟಿದ್ದು ಏಳು ದಿನದ ಮಗುವಿನಿಂದಲೇ ಈ ದಂಪತಿ ಆನೆ ಮರಿಯನ್ನು ಸಾಕುತ್ತಿದ್ದಾರೆ. ತಾಯಿ ಆನೆಯಿಂದ ಬೇರ್ಪಟ್ಟ ಮರಿ ಆನೆಗೆ ಕಾವಾಡಿ ರಾಜು ಪೋಷಕರಾಗಿದ್ದಾರೆ. ಹೆತ್ತ ಮಗುವಂತೆ ಪಾಲನೆ ಪೋಷಣೆ ಮಾಡುತ್ತಿದ್ದಾರೆ.
ಅನಾಥ ಹೆಣ್ಣು ಆನೆಗೆ ಈ ದಂಪತಿ ಆಸರೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.ಕಾವಾಡಿ ರಾಜು ಮತ್ತು ರಮ್ಯಾ ಎಂಬ ದಂಪತಿ 7 ತಿಂಗಳ ಹೆಣ್ಣು ಆನೆ ವೇದಾಳನ್ನ ಸ್ವಂತ ಮಗುವಂತೆ ಸಾಕಿ ಸಲಹುತ್ತಿದ್ದಾರೆ. ವೇದ ಹುಟ್ಟಿದ 7 ದಿನಕ್ಕೆ ತಾಯಿಯಿಂದ ದೂರವಾಗಿದೆ. ಆಗಿನಿಂದಲು ಮರಿ ಹೆಣ್ಣಾನೆ ಪಾಲಿಗೆ ಕಾವಾಡಿ ದಂಪತಿಯೇ ತಂದೆ ತಾಯಿ ಎಂಬಂತಾಗಿದೆ. ವೇದಾಳನ್ನ ಸ್ವಂತ ಮಗಳಂತೆ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಪ್ರತಿ ದಿನ 12 ಲೀಟರ್ ಹಾಲು ಕುಡಿಯುವ ವೇದ, ಕಾವಾಡಿ ದಂಪತಿಯ ಮುದ್ದು ಮಗುವಿನಂತಾಗಿದೆ. ದಂಪತಿಗಳ ನಿಸ್ವಾರ್ಥ ಸೇವೆಗೆ ಬಂಡಿಪುರ ಅರಣ್ಯ ಅಧಿಕಾರಿಗಳ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮರಿಯಾನೆ ಪೋಷಣೆಗೆ ಬೇಕಾದ ಆರ್ಥಿಕ ಸಹಾಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.