ನ್ಯೂಸ್ ನಾಟೌಟ್ : ಕಾಡು ಪ್ರಾಣಿಗಳ ಉಪಟಳ ಜೋರಾಗಿದೆ.ಎಲ್ಲಿಯವರೆಗೆ ಅಂದ್ರೆ ಮನೆ ಅಂಗಳಕ್ಕೆ ಕಾಡುಪ್ರಾಣಿಗಳು ಬಂದು ರಾಜಾರೋಷವಾಗಿ ಓಡಾಡುವಷ್ಟು.ಹೌದು, ಇತ್ತೀಚೆಗೆ ರಾತ್ರಿಯಾಗುತ್ತಿದ್ದಂತೆ ಚಿರತೆಗಳ ಕಾಟ ಹೆಚ್ಚಾಗಿದ್ದು ಕಟ್ಟಿ ಹಾಕಿರುವ ದನಗಳನ್ನೆ ಕೊಲ್ಲುತ್ತಿವೆ.ಸಾಕು ನಾಯಿಯನ್ನು ಹೊತ್ತೊಯ್ದ ಘಟನೆಗಳು ವರದಿಯಾಗಿವೆ. ಇದೀಗ ಈ ಒಂದು ಘಟನೆ ಉಲ್ಟಾ ತಿರುಗಿದೆ.ಚಿರತೆಯನ್ನೇ ಶ್ವಾನಗಳು ಸೇರಿ ಓಡಿಸಿದ ಘಟನೆ ವರದಿಯಾಗಿದೆ.
ಮಹಾರಾಷ್ಟ್ರದ ನಾಸಿಕ್ ನಲ್ಲಿ ಈ ಘಟನೆ ನಡೆದಿದ್ದು,ಮನೆಯೊಳಗೆ ನುಗ್ಗಲು ಯತ್ನಿಸಿದ ಚಿರತೆಯೊಂದನ್ನು ನಾಯಿಗಳು ಸೇರಿ ಹಿಮ್ಮೆಟ್ಟಿಸಿದ ಘಟನೆ ಬೆಳಕಿಗೆ ಬಂದಿದೆ.ನಾಸಿಕ್ನ ಅಡ್ಗಾಂವ್ ಶಿವಾರ್ ಪ್ರದೇಶದಲ್ಲಿರುವ ಮನೆಯೊಂದರ ಕಾಂಪೌಂಡ್ ಹಾರಿ ಒಳ ಪ್ರವೇಶಿಸಿದ ಚಿರತೆಯೊಂದು ಮನೆಯ ಆವರಣದಲ್ಲಿ ಮಲಗಿದ್ದ ಶ್ವಾನದ ಮೇಲೆ ದಾಳಿ ನಡೆಸಿದೆ.
ಈ ವೇಳೆ ಅಲ್ಲೇ ಇದ್ದ ಇನ್ನೊಂದು ಶ್ವಾನ ಎಚ್ಚರಗೊಂಡು ಚಿರತೆ ಮೇಲೆ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಗಾಬರಿಗೊಂಡ ಚಿರತೆ ತನ್ನ ರಕ್ಷಣೆಗೆ ಮುಂದಾಗಿ ಸ್ಥಳದಿಂದ ಪರಾರಿಯಾಗಿದೆ.ಘಟನೆಯ ದೃಶ್ಯ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎರಡು ನಾಯಿಗಳು ಜೊತೆಯಾಗಿ ದಾಳಿಗೆ ಮುಂದಾದ ಚಿರತೆಯನ್ನು ಹಿಮ್ಮೆಟ್ಟಿಸಿದೆ ಎಂಬುದನ್ನು ದೃಶ್ಯದಲ್ಲಿ ಕಾಣಬಹುದು.
ತನ್ನ ರಕ್ಷಣೆಯಾದರೆ ಸಾಕು, ಇತರರು ಹೇಗೆ ಬೇಕಾದರೂ ಇರಲಿ ಎನ್ನುವವರಿಗೆ ಶ್ವಾನಗಳ ಒಗ್ಗಟ್ಟಿನ ಸಂದೇಶ ನಿಜಕ್ಕೂ ಶ್ಲಾಘನಾರ್ಹವಾದುದು.ಎಲ್ಲಿ ಒಗ್ಗಟ್ಟಿರುತ್ತೋ ಅಲ್ಲಿ ಬಲವಿದೆ ಎಂಬಂತೆ ಇಲ್ಲಿ ಒಂದೇ ಶ್ವಾನ ಇರುತ್ತಿದ್ದರೆ ಬಹುಶಃ ಬದುಕುಳಿಯುತ್ತಿರಲಿಲ್ಲವೇನೋ ಆದರೆ ಇನ್ನೊಂದು ಶ್ವಾನ ಬಂದಿರುವುದರಿಂದ ಚಿರತೆ ಗಾಬರಿಗೊಂಡು ಓಡಿ ಹೋಗಿದೆ.ಹೀಗಾಗಿ ಎರಡು ಶ್ವಾನಗಳು ತಮ್ಮ ಪ್ರಾಣವನ್ನು ಉಳಿಸಿಕೊಂಡಿದೆ.