ನ್ಯೂಸ್ ನಾಟೌಟ್: ರಾಜಕಾರಣಿಗಳು ಬಡವರ ನೋವಿಗೆ ಸ್ಪಂದಿಸುವುದೇ ಇಲ್ಲ ಅನ್ನುವ ಮಾತುಗಳಿವೆ. ಆದರೆ ಇಲ್ಲೊಬ್ಬ ರಾಜಕಾರಣಿ ಅದನ್ನೆಲ್ಲ ಮೀರಿ ನಿಂತು ಸುದ್ದಿಯಾಗಿದ್ದಾರೆ. ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಪರದಾಡುತ್ತಿದ್ದ ವ್ಯಕ್ತಿಗೆ ಶಾಸಕರೊಬ್ಬರು ಸ್ವತಃ ತಾವೇ ಶಸ್ತ್ರಚಿಕಿತ್ಸೆ ನಡೆಸಿ ಸುದ್ದಿಯಾಗಿದ್ದಾರೆ.
ಕುಣಿಗಲ್ ಶಾಸಕ ಡಾ.ರಂಗನಾಥ್ ತನ್ನ ಕ್ಷೇತ್ರದ ಬಡ ವ್ಯಕ್ತಿಗೆ ಆಪರೇಶನ್ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸ್ವತಃ ವೈದ್ಯರಾಗಿರುವ ಶಾಸಕರ ಕರ್ತವ್ಯ ಪ್ರಜ್ಞೆಗೆ ಈಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಯಡವಾಣಿ ಗ್ರಾಮದ ಶಿವನಂಜಯ್ಯ ಎಂಬುವವರು ಹಲವಾರು ದಿನಗಳಿಂದ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಅವರ ಬಳಿ ಚಿಕಿತ್ಸೆಗೆ ಹಣವಿರಲಿಲ್ಲ. ಈ ವಿಚಾರವಾಗಿ ಶಾಸಕರಿಗೆ ಮನವಿ ಮಾಡಿ ಚಿಕಿತ್ಸಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು.
ಬಡ ವ್ಯಕ್ತಿಯ ಈ ಮನವಿಗೆ ಶಾಸಕರು ತುರ್ತಾಗಿ ಸ್ಪಂದಿಸಿದರು. ರೋಗಿಯನ್ನು ಪರೀಕ್ಷಿಸಿ ಶಸ್ತ್ರಚಿಕಿತ್ಸೆ ನಡೆಸುವ ಅನಿವಾರ್ಯತೆಯನ್ನು ಮನದಟ್ಟು ಮಾಡಿದರು.
ಅಂತೆಯೇ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸುವುದಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸಲಾಯಿತು. ವೈದ್ಯರ ತಂಡವನ್ನು ಒಟ್ಟು ಗೂಡಿಸಿಕೊಂಡು ಶಾಸಕರು ತಾವೇ ಆಪರೇಶನ್ ಮಾಡುವುದಕ್ಕೆ ಅಣಿಯಾದರು.
ಇದೀಗ ಆಪರೇಶನ್ ನಡೆಸಿ ಶಿವನಂಜಯ್ಯ ಅವರ ನೋವನ್ನು ಕಡಿಮೆಗೊಳಿಸುವ ಪ್ರಯತ್ನವನ್ನು ಶಾಸಕರು ನಡೆಸಿದ್ದಾರೆ. ಈ ಹಿಂದೆ ಅಂದರೆ ಜೂನ್ ೨೭ರಂದು ಕೀಲು ಜಾರಿದ (ಡಿಸ್ಲೊಕೇಟ್) ಸಮಸ್ಯೆಯಿಂದ ಬಳಲುತ್ತಿದ್ದ ಕುಣಿಗಲ್ ತಾಲೂಕು ಕುಂದೂರು ಗ್ರಾಮದ ಬಡ ಮಹಿಳೆಗೂ ಶಾಸಕರು ಇದೇ ರೀತಿಯಲ್ಲಿ ನೆರವಾಗಿದ್ದರು. ಜರ್ಮನಿಯಿಂದ ಕೃತಕ ಕೀಲು ತರಿಸಿ ಅವರೇ ಶಸ್ತ್ರಚಿಕಿತ್ಸೆ ನಡೆಸಿ ಸುದ್ದಿಯಾಗಿದ್ದರು.