ನ್ಯೂಸ್ ನಾಟೌಟ್ : ಈ ಹಿಂದೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಗೆ ತೆರಳಿ ಶುಭಾಶಯ ಕೋರಿದ್ದರು. ಡಿಕೆಶಿ ಅವರು ಬೊಮ್ಮಾಯಿ ಜೊತೆ ಸೌಜನ್ಯದಿಂದ ಇರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದು ಹೊಂದಾಣಿಕೆ ರಾಜಕೀಯವಲ್ಲದೇ ಮತ್ತೇನು ಎಂಬ ಪ್ರಶ್ನೆಗಳು ಚರ್ಚೆಗೆ ಕಾರಣವಾಗಿದ್ದವು ಮಾತ್ರವಲ್ಲದೆ ಸ್ವಪಕ್ಷೀಯ ನಾಯಕರೆ ಇದರ ವಿರುದ್ಧ ತಿರುಗಿ ಬಿದ್ದಿದ್ದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮಗೆ ಸಿಕ್ಕಿರುವ ಎಲ್ಲಾ ಕುದುರೆಗಳನ್ನು ಯಶಸ್ವಿಯಾಗಿ ಏರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿದ್ದಾರೆ. ನೂತನ ಉಪಸಭಾಪತಿ ಆಯ್ಕೆ ಬಳಿಕ ಮಾತನಾಡಿದ ಬೊಮ್ಮಾಯಿ, ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ.
‘ಕೊಟ್ಟ ಕುದುರೆಯನ್ನು ಏರದವನು ಶೂರನೂ ಅಲ್ಲ, ಧೀರನೂ ಅಲ್ಲವೆಂದು ಹೇಳಲಾಗುತ್ತದೆ. ಆದರೆ, ಡಿಕೆ ಶಿವಕುಮಾರ್ ಅವರು ಕೊಟ್ಟ ಕುದುರೆಗಳನ್ನೆಲ್ಲ ಯಶಸ್ವಿಯಾಗಿಯೇ ಏರಿದ್ದಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಹೇಳಿದ್ದಾರೆ.
ಶಿವಕುಮಾರ್ ಅವರಿಗೆ ಇನ್ನು ಮುಂದೆ ಯಾವ ಕುದುರೆ ಸಿಗುತ್ತದೆ ಎಂದು ಕಾದು ನೋಡೋಣ. ಮೊದಲು ಅವರು ಪವರ್ ಮಿನಿಸ್ಟರ್ ಆದರು. ಪವರ್ ಖಾತೆ ಜೊತೆಗೆ ಪವರ್ ಪೊಲಿಟಿಕ್ಸ್ ಅನ್ನೂ ಮಾಡಿದರು ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಮುಂದೆ ಏನು ಬೇಕಾದರೂ ಆಗಬಹುದು. ನಮಗೆ ಯಾರೂ ಪವರ್ ಅನ್ನು ಕೊಡಲ್ಲ. ನಾವು ಅದನ್ನು ಕಿತ್ತುಕೊಳ್ಳಬೇಕು. ಅದನ್ನು ಡಿಕೆಶಿ ಚೆನ್ನಾಗಿ ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಬೆಂಕಿ ಹೊತ್ತುಕೊಂಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹಾಗು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು ತಮ್ಮದೇ ಪಕ್ಷದ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದರು.
ಪಕ್ಷದ ದೊಡ್ಡ ನಾಯಕರು ಹೊಂದಾಣಿಕೆ ರಾಜಕಾರಣದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ ಎಂದು ಹೇಳಿದ್ದರು. ಮಾಜಿ ಸಿಎಂ ನಡೆ ಈಗ ಮತ್ತೆ ಚರ್ಚೆಗೆ ಕಾರಣವಾಗಿದೆ.