ನ್ಯೂಸ್ ನಾಟೌಟ: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಸಂಖ್ಯೆ, ವ್ಯಾಪ್ತಿ ನಿರ್ಣಯದ ವಿಂಗಡಣೆಯ ಸಭೆ ತಾಲೂಕು ಕಚೇರಿಯಲ್ಲಿ ಸೋಮವಾರ (ಜು.24) ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮುಂದೆ ನಡೆಯಲಿರುವ ಜಿಲ್ಲಾಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸುಳ್ಯ ತಾಲೂಕಿನ ಕ್ಷೇತ್ರಗಳು ಪುನರ್ ವಿಂಗಡನೆಯಾಗಲಿದ್ದು, 3 ಜಿಲ್ಲಾ ಪಂಚಾಯತ್ ಕ್ಷೇತ್ರಗಳು ಮತ್ತು 11 ತಾಲೂಕು ಪಂಚಾಯತ್ ಕ್ಷೇತ್ರಗಳು ಇರಲಿದೆ ಎಂದು ಕರಡು ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದ್ದು, ಈ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರ ಅಭಿಪ್ರಾಯ ಪಡೆಯಲಾಯಿತು.
ತಹಶೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರ ಸಂಖ್ಯೆ ಒಂದು ಏರಿಸಿದರೆ ಉತ್ತಮ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಸಲಹೆ ನೀಡಿದರು. ಆದರೆ ತಾಲೂಕು ಪಂಚಾಯತ್ ಕ್ಷೇತ್ರ ವಿಂಗಡನೆಯ ಬಗ್ಗೆ ಎರಡೂ ಪಕ್ಷಗಳು ಮುಖಂಡರು ವ್ಯತಿರಿಕ್ತ ಅಭಿಪ್ರಾಯ ಮಂಡಿಸಿದರು.
ಬಿಜೆಪಿಯಿಂದ ಹರೀಶ್ ಕಂಜಿಪಿಲಿ ಮಾತನಾಡಿ ಪೆರುವಾಜೆ – ಕೊಡಿಯಾಲ- ಮುರುಳ್ಯ ಗ್ರಾಮ ಸೇರಿಸಿ ಪೆರುವಾಜೆ ಕ್ಷೇತ್ರ ರಚಿಸಬೇಕು. ಬೆಳ್ಳಾರೆ, ಬಾಳಿಲ, ಮುಪ್ಪೇರ್ಯ, ಕಳಂಜ ಗ್ರಾಮವನ್ನು ಸೇರಿಸಿ ಬೆಳ್ಳಾರೆ ಕ್ಷೇತ್ರ ರಚಿಸಬೇಕು ಎಂಬ ಸಲಹೆ ನೀಡಿದರು. ಜಿಲ್ಲಾಪಂಚಾಯತ್ 3 ಕ್ಷೇತ್ರಗಳಿಗೆ ನಮ್ಮ ಸಹಮತವಿದೆ. ಆದರೆ 4 ಮಾಡುವುದಾದರೆ ಸೇರ್ಪಡೆಗೊಳಿಸುವ ಗ್ರಾಮಗಳ ಬಗ್ಗೆ ಸಲಹೆ ನೀಡುತ್ತೇವೆ ಎಂದು ಬಿಜೆಪಿ ಮುಖಂಡರು ತಿಳಿಸಿದರು.
ಕಾಂಗ್ರೆಸ್ ಮುಖಂಡ ಪಿ.ಎಸ್.ಗಂಗಾಧರ್ ಮಾತನಾಡಿ, ಬೆಳ್ಳಾರೆ, ಪೆರುವಾಜೆ, ಕೊಡಿಯಾಲ ಗ್ರಾಮ ಸೇರಿಸಿ ಬೆಳ್ಳಾರೆ ತಾಪಂ ಕ್ಷೇತ್ರ ಇರಲಿ. ಬಾಳಿಲ, ಮುಪ್ಪೇರ್ಯ, ಕಳಂಜ ಸೇರಿಸಿ ಬಾಳಿಲ ಕ್ಷೇತ್ರ ರೂಪಿಸಬೇಕು ಎಂದು ಸಲಹೆ ನೀಡಿದರು. ಆಗ ರಾಜೀವಿ ಆರ್. ರೈಯವರು ಕೂಡ ಇದೆ ಸಲಹೆ ನೀಡಿದರು.
ಈ ಸಂದರ್ಭ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ಹಾಗೂ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಹರೀಶ್ ಕಂಜಿಪಿಲಿಯವರು ಬಿಜೆಪಿ ವತಿಯಿಂದ ನಾವು ಹೇಳಿದ ಪ್ರಸ್ತಾವನೆ ಬರೆದುಕೊಳ್ಳಿ ಎಂದು ಹೇಳಿದಾಗ, ಇಲ್ಲಿ ಪಕ್ಷದ ವಿಚಾರ ಅಲ್ಲ. ಎಲ್ಲರೂ ಸೇರಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳೋಣ ಎಂದರು. ಬಳಿಕ ಎರಡು ಪಕ್ಷದ ನಾಯಕರು ನೀಡಿದ ಪ್ರಸ್ತಾವನೆಯನ್ನು ಬರೆದುಕೊಳ್ಳಲಾಯಿತು.
ಸಭೆಯಲ್ಲಿ ಕಾಂಗ್ರೆಸ್ನ ಸದಾನಂದ ಮಾವಜಿ, ಅನಿಲ್ ಬಳ್ಳಡ್ಕ, ಜೆಡಿಎಸ್ನ ರಾಕೇಶ್ ಕುಂಟಿಕಾನ, ಬಿಜೆಪಿಯ ಎ.ವಿ. ತೀರ್ಥರಾಮ, ಎಸ್.ಎನ್. ಮನ್ಮಥ, ಮಾಧವ ಚಾಂತಾಳ, ಸುನಿಲ್ ಕೇರ್ಪಳ, ಶ್ರೀನಾಥ್ ರೈ,ಮಹೇಶ್ ರೈ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.