ನ್ಯೂಸ್ ನಾಟೌಟ್ : ಅಮರನಾಥ ಯಾತ್ರೆ ಕೈಗೊಂಡಿದ್ದ ದ.ಕ.ಜಿಲ್ಲೆಯ 20 ಮಂದಿ ಯಾತ್ರಾರ್ಥಿಗಳು ಸಿ.ಆರ್.ಪಿ.ಎಫ್ ನ ಕ್ಯಾಂಪ್ ನಲ್ಲಿ ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭೂಕುಸಿತದಿಂದ ದ.ಕ ಜಿಲ್ಲೆಯ ಅಮರನಾಥ ಯಾತ್ರಿಗಳಾಗಿದ್ದ, ಬಂಟ್ಬಾಳ ತಾಲೂಕಿನ ನರಿಕೊಂಬಿನ ಸಂತೋಷ್ ಮಾರುತಿನಗರ ನೇತೃತ್ವದ ತಂಡ ಅಪಾಯದಿಂದ ಪಾರಾಗಿದ್ದಾರೆ. ರಂಭಾನ್ ಎಂಬಲ್ಲಿ ಗುಡ್ಡ ಕುಸಿತದಿಂದ ಅಮರನಾಥ ದಾರಿ ಸಂಪೂರ್ಣ ಸ್ಥಗಿತಗೊಂಡಿತ್ತು ಮತ್ತು ಮಣ್ಣು ತೆರವು ಕಾರ್ಯ ನಡೆಯುತ್ತಿದ್ದರೂ ಮತ್ತೆ ಭೂಕುಸಿತಗಳು ಸಂಭವಿಸಿ ಅನೇಕ ಅಮರನಾಥ ಯಾತ್ರಾರ್ಥಿಗಳು ಸಿಲುಕಿಕೊಂಡಿದ್ದರು.
ಆದರೆ ದಕ್ಷಿಣ ಕನ್ನಡದಿಂದ ತೆರಳಿದ್ದ 20 ಜನ ಯಾತ್ರಾರ್ಥಿಗಳು ತಂಡ ಭೂಕುಸಿತ ಕಂಡ ಕಾರಣ ಯಾತ್ರೆಯನ್ನು ಸ್ಥಗಿತಗೊಳಿಸಿ ಸೇನಾ ಕ್ಯಾಂಪ್ ನಲ್ಲಿ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.
ಅಮರನಾಥ ದೇವಾಲಯಕ್ಕೂ ಹೋಗಲು ಸಾಧ್ಯವಾಗದೆ, ಅತ್ತ ಕೆಳಗೆ ಜಮ್ಮು ಕಾಶ್ಮೀರ ಕ್ಕೂ ಹೋಗಲೂ ಸಾಧ್ಯವಾಗದೆ ಸಿ.ಆರ್.ಪಿ.ಎಫ್ ಕ್ಯಾಂಪ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.
ದ.ಕ.ಜಿಲ್ಲೆ ಹಾಗೂ ಉಡುಪಿಯಿಂದ ತೆರಳಿದ್ದ ವಿವಿಧ ತಾಲೂಕಿನ ಹಲವು ಮಂದಿ ಯಾತ್ರಾರ್ಥಿಗಳು ಜುಲೈ 4ರಂದು ರೈಲಿನ ಮೂಲಕ ಯಾತ್ರೆ ಕೈಗೊಂಡಿದ್ದರು ಎಂದು ವರದಿ ತಿಳಿಸಿದೆ. ನರಿಕೊಂಬುನಿಂದ ಒಟ್ಟು 5 ಮಂದಿ, ಮಂಗಳೂರು ಅಡ್ಯಾರಿನಿಂದ 8, ಪುತ್ತೂರಿನಿಂದ 1, ಉಡುಪಿಯಿಂದ 1 , ಮೂಡಬಿರೆಯಿಂದ 1 , ಸಜೀಪದಿಂದ 3, ಉಪ್ಪಿನಂಗಡಿ ಕರಾಯದಿಂದ 1 ಒಟ್ಟು 20 ಯಾತ್ರಾರ್ಥಿಗಳು ಯಾತ್ರೆಗೆ ತೆರಳಿದ್ದಾರೆ ಎಂಬ ಮಾಹಿತಿ ದೊರೆತಿದೆ.