ನ್ಯೂಸ್ ನಾಟೌಟ್ : ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಡೆದು ಸರ್ಕಾರಿ ಕೆಲಸ ಪಡೆದುಕೊಳ್ಳುವ ವ್ಯಕ್ತಿಗಳು ವರ್ಷಗಳು ಕಳೆದಂತೆ ಲಂಚಕ್ಕೆ ಕೈಯೊಡ್ಡುವುದು ಸಾಮಾನ್ಯ ಎಂಬಂತೆ ಪರಿಸ್ಥಿತಿ ನಿರ್ಮಾಣವಾಗಿವೆ. ಆದರೆ, ಜೆಪಿಎಸ್ಸಿ ಪರೀಕ್ಷೆಯಲ್ಲಿ 108ನೇ ರ್ಯಾಂಕ್ ಪಡೆದು ಒಂದು ವಾರದ ಹಿಂದೆಯಷ್ಟೇ ಮೊದಲ ಪೋಸ್ಟಿಂಗ್ ಪಡೆದುಕೊಂಡಿದ್ದ ಮಿಥಾಲಿ ಶರ್ಮ ಎಂಬಾಕೆ ಮೊದಲ ದಿನವೇ ತನ್ನ ಮೊದಲ ಲಂಚ ಪಡೆಯುವಾಗಲೇ ರೆಡ್ಹ್ಯಾಂಡ್ ಆಗಿ ಜಾರ್ಖಂಡ್ ರಾಜ್ಯದಲ್ಲಿ ಸಿಕ್ಕಿಬಿದ್ದಿದ್ದಾರೆ.
ಜಾರ್ಖಂಡ್ ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೋ-ಆಪರೇಟಿವ್ ಸೊಸೈಟಿಯಲ್ಲಿ ಸಹಾಯಕ ರಿಜಿಸ್ಟ್ರಾರ್ ಹುದ್ದೆಯಲ್ಲಿದ್ದ ಮಿಥಾಲಿ ಶರ್ಮರನ್ನು ಬಂಧಿಸಿದೆ. 10 ಸಾವಿರ ಲಂಚ ಪಡೆಯುವಾಗ ಈಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ. ಮಿಥಾಲಿ ಶರ್ಮ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ರಾಮೇಶ್ವರ ಪ್ರಸಾದ್ ಯಾದವ್ ಎನ್ನುವ ವ್ಯಕ್ತಿಯಿಂದ ದೂರು ದಾಖಲಾದ ಬೆನ್ನಲ್ಲಿಯೇ ಎಸಿಬಿ ಕಾರ್ಯಪ್ರವೃತ್ತವಾಗಿ ಮಿಥಾಲಿ ಶರ್ಮಳನ್ನು ಬಂಧಿಸಿದೆ.
ಯಾದವ್ ಎಂಬವರು ಕೊಡೆರ್ಮಾ ವ್ಯಾಪಾರ್ ಮಂಡಲ್ ಸಹೋಗ್ ಸಮಿತಿ ಲಿಮಿಟೆಡ್ನ ನಿರ್ವಹಣಾ ಸಮಿತಿಯ ಸದಸ್ಯರಾಗಿದ್ದಾರೆ. ಜೂನ್ 16 ರಂದು ಮಿಥಾಲಿ ಶರ್ಮ ಅವರು ಕಚೇರಿಯ ಪರಿಶೀಲನೆಗೆ ಆಗಮಿಸಿದರು. ನನಗೆ ಗೊತ್ತಿಲ್ಲದ ಯಾವುದೋ ವಿಚಾರವನ್ನು ಹಿಡಿದುಕೊಂಡು ನನಗೆ ಶೋಕಾಸ್ ನೋಟೀಸ್ ಜಾರಿ ಮಾಡಿದ್ದರು. ಇದನ್ನು ಕೇಳುವ ಕುರಿತಾಗಿ ನಾನು ಅವರ ಕಚೇರಿಗೆ ಹೋಗಿದ್ದೆ ಈ ವೇಳೆ ಇಲಾಖಾ ಶಿಸ್ತು ಕ್ರಮದಿಂದ ಪಾರಾಗಬೇಕಿದ್ದಲ್ಲಿ 20 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ರಾಮ್ಪ್ರಸಾದ್ ಯಾದವ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ತನ್ನದಲ್ಲದ ತಪ್ಪಿಗೆ ಯಾವುದೇ ಕಾರಣಕ್ಕೂ ಲಂಚ ನೀಡುವುದಿಲ್ಲ ಎಂದು ನಿರ್ಧಾರ ಮಾಡಿದ್ದ ರಾಮ್ಪ್ರಸಾದ್ ಯಾದವ್, ಮುಂದಿನ ಕ್ರಮಕ್ಕಾಗಿ ಜಾರ್ಖಂಡ್ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳನ್ನು ಸಂಪರ್ಕಿಸಿದ್ದರು ಎಂದು ತನ್ನ ದೂರಿನಲ್ಲಿ, ತಿಳಿಸಲಾಗಿದೆ.
ಈ ದೂರಿಗೆ ಸಂಬಂಧಿಸಿದಂತೆ ಬ್ಯೂರೋ ಕಚೇರಿಯಿಂದ ಪರಿಶೀಲನೆ ಕೂಡ ನಡೆಸಲಾಗಿದೆ. ಪರಿಶೀಲನಾ ವರದಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ನಿಜ ಎಂದು ತಿಳಿದುಬಂದಿದೆ. ಆಕೆಯನ್ನು ರೆಡ್ಹ್ಯಾಂಡ್ ಆಗಿ ಹಿಡಿಯುವ ಉದ್ದೇಶದಿಂದ ರಾಮ್ಪ್ರಸಾದ್ ಯಾದವ್ ನೀಡಿದ 10 ಸಾವಿರ ರೂಪಾಯಿ ಹಣವನ್ನು ಹಿಡಿದುಕೊಂಡಾಗಲೇ ಮಿಥಾಲಿ ಶರ್ಮರನ್ನು ಬಂದಿಸಲಾಗಿದೆ ಎನ್ನಲಾಗಿದೆ.