ಚಿಕ್ಕಮಗಳೂರು : ಕಳೆದ ಕೆಲ ತಿಂಗಳ ಹಿಂದೆ ಸುಳ್ಯದ ಅಜ್ಜಾವರದಲ್ಲಿ ಕೆರೆಯೊಂದಕ್ಕೆ ನಾಲ್ಕು ಕಾಡಾನೆಗಳು ಬಿದ್ದು ಒದ್ದಾಡಿದ ಘಟನೆ ವರದಿಯಾಗಿತ್ತು.ಅದರಲ್ಲಿ ಮರಿಯಾನೆಯೊಂದು ತಾಯಿಯಿಂದ ಬೇರ್ಪಟ್ಟು ಯಾತನೆ ಅನುಭವಿಸಿತ್ತು. ಇದೀಗ ಅಂತಹುದ್ದೇ ಘಟನೆಯೊಂದು ಚಿಕ್ಕಮಗಳೂರಿನಿಂದ ವರದಿಯಾಗಿದೆ.
ತನ್ನ ಹಿಂಡಿನಿಂದ ತಪ್ಪಿಸಿಕೊಂಡಿರುವ ಕಾಡಾನೆ ಮರಿಯೊಂದು (elephant cub) ಚಡಪಡಿಸುತ್ತಿರುವ ಹೃದಯ ಹಿಂಡುವ ಘಟನೆ ಕಂಡು ಬಂದಿದೆ. ದಾರಿ ಕಾಣದೇ ಪೇಚಾಡುತ್ತಿರುವ ಅಸಹಾಯಕ ಮರಿಯಾನೆ ಸದ್ಯ ಮನುಷ್ಯರು ಹೇಳಿದಂತೆ ಕೇಳುತ್ತಿರುವುದು (viral video) ವಿಶೇಷವೆಂಬಂತಿದೆ.ಬಾ ಎಂದರೆ ಬರುವ , ಹೋಗು ಎಂದರೆ ಹೋಗುವ ಈ ಮರಿಯಾನೆಯನ್ನು ಕಂಡು ಎಲ್ಲರ ಮನಸ್ಸು ಕರಗಿದೆ.ಇದೀಗ ಈ ಮರಿಯಾನೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಹೌದು ,ಹೇಳಿದ ಮಾತನ್ನ ಮಕ್ಕಳಂತೆ ಕೇಳುವ ಕಾಡಾನೆ ಮರಿ ಇದೀಗ ಪುಟ್ಟ…ಪುಟ್ಟ… ಹೆಜ್ಜೆ ಇಟ್ಕೊಂಡು ಅಮ್ಮನಿಗಾಗಿ ಪರಿತಪಿಸುತ್ತಿದ್ದು ಕರುಳು ಹಿಂಡುವಂತಿದೆ.ಈ ದೃಶ್ಯ ಕಂಡು ಬಂದಿದ್ದು,ಮೂಡಿಗೆರೆಯ-ಬೇಲೂರು ರಸ್ತೆಯ ಚೀಕನಹಳ್ಳಿ ಬಳಿಯ ಕಾಫಿ ತೋಟದಲ್ಲಿ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ- ಸಕಲೇಶಪುರ ಗಡಿಯಲ್ಲಿ ದೊಡ್ಡದೊಂದು ಕಾಡಾನೆ ಹಿಂಡು ಇದ್ದು,ಆ ತಂಡದ ಮರಿ ಇರಬಹುದು ಎಂದು ಅರಣ್ಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.ಆದರೆ ಕಾಫಿ ತೋಟಕ್ಕೆ ನುಗ್ಗಿದ ಆನೆ ಹಿಂಡನ್ನು ಓಡಿಸುವಾಗ ಈ ಮರಿ ತಪ್ಪಿಸಿಕೊಂಡಿರಬಹುದು ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ.ದಿಕ್ಕು ತೋಚದಂತಾದ ಆನೆ ಮರಿಗೆ ನೀರು ನೀಡಿ ಅರಣ್ಯ ಅಧಿಕಾರಿಗಳು ಸಂತೈಸಿದ್ದಾರೆ.
ಮರಿ ಆನೆಯನ್ನು ಹೇಗಾದರೂ ಮಾಡಿ ಅದರ ಅಮ್ಮನ ಬಳಿ ಸೇರಿಸಬೇಕು ಎನ್ನು ಹಠದಲ್ಲಿ ಅರಣ್ಯ ಅಧಿಕಾರಿಗಳು ಇದ್ದು, ಪ್ರಯತ್ನ ಪಡುತ್ತಲೇ ಇರುತ್ತಾರೆ.ಸಾಮಾನ್ಯವಾಗಿ ಗುಂಪಿನಿಂದ ಬೇರ್ಪಟ್ಟ ಮರಿಯನ್ನು ಆನೆಗಳ ಗುಂಪು ನಂತರ ಹತ್ತಿರ ಸೇರಿಸುವುದಿಲ್ಲ.ಅದಕ್ಕಿಂತಲೂ ಹೆಚ್ಚಾಗಿ ಆನೆಗಳ ಗುಂಪು ಮರಿಯನ್ನು ಬಿಟ್ಟು ಎಲ್ಲಿಗೆ ಹೋಗಿದೆ ಎಂದು ತಿಳಿದಿಲ್ಲ. ಶತಾಯಗತಾಯ ಮರಿಯನ್ನು ಅಮ್ಮನ ಬಳಿ ಸೇರಿಸಬೇಕು ಎಂದು ಅಧಿಕಾರಿಗಳು ಯತ್ನಿಸುತ್ತಿದ್ದಾರೆ.