ನ್ಯೂಸ್ ನಾಟೌಟ್ : ದೇವರಿಗೆ ಬಲಿಕೊಟ್ಟ ಮೇಕೆಯಿಂದಲೇ ವ್ಯಕ್ತಿಯೊಬ್ಬನ ಪ್ರಾಣಪಕ್ಷಿ ಹಾರಿ ಹೋಗಿರುವ ಘಟನೆ ಛತ್ತೀಸ್ಗಢದ ಸೂರಜ್ಪುರ ಜಿಲ್ಲೆಯಲ್ಲಿ ನಡೆದಿದೆ.ಬಗರ್ ಸಾಯಿ (50) ಎಂಬ ವ್ಯಕ್ತಿ ಮೃತ ದುರ್ದೈವಿ.
ತನ್ನ ಇಷ್ಟಾರ್ಥ ನೆರವೇರಲಿ ಎಂದು ಬೇಡಿದ ಆ ವ್ಯಕ್ತಿ ಮೇಕೆಯನ್ನು ಬಲಿ ಕೊಡುವುದಾಗಿ ಹರಕೆ ಹೇಲಿಕೊಂಡಿದ್ದರು. ಅದರಂತೆ ಇಷ್ಟಾರ್ಥ ನೆರವೇರಿದ ನಂತರ ಭಾನುವಾರ ( ಜು.2 ರಂದು) ಮೇಕೆಯನ್ನು ಹಿಡಿದುಕೊಂಡು ಮದನ್ಪುರ ಗ್ರಾಮದ ನಿವಾಸಿಗಳೊಂದಿಗೆ ಖೋಪಾಧಾಮ್ಗೆ ತೆರಳಿ ಅಲ್ಲಿ ಮೇಕೆಯನ್ನು ಬಲಿ ಕೊಟ್ಟಿದ್ದಾರೆ.
ಗ್ರಾಮಸ್ಥರು ಹಾಗೂ ಬಲಿಕೊಟ್ಟ ವ್ಯಕ್ತಿ ಸೇರಿ ಅದರ ಮಾಂಸವನ್ನು ಬೇಯಿಸಿ ಊಟಕ್ಕೆ ಕುಳಿತಿದ್ದಾರೆ. ಈ ವೇಳೆ ಬಗರ್ ಸಾಯಿ ಅವರಿಗೆ ಮಾಂಸದಿಂದ ಮೇಕೆಯ ಕಣ್ಣು ಸಿಕ್ಕಿದ್ದು, ನುಂಗಲು ಯತ್ನಿಸಿದ್ದು ಆದರೂ ಅವರ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಕೂಡಲೇ ಅವರನ್ನು ಊಟದ ಜಾಗದಿಂದಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತಾದರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.