ನ್ಯೂಸ್ ನಾಟೌಟ್: ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮಳೆಗೆ ಪುತ್ತೂರಿನ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ದೇ ಗ್ರಾಮದ ಚೆಲ್ಯಡ್ಕ ಮುಳುಗು ಸೇತುವೆ ಗುರುವಾರ (ಜು.6ರಂದು) ಮುಂಜಾನೆ ಮುಳುಗಡೆಯಾಗಿದೆ.
ಚೆಲ್ಯಡ್ಕ ಸೇತುವೆ ಪ್ರತಿ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮುಳುಗು ಸೇತುವೆ ಎಂದು ಪ್ರಸಿದ್ಧಿಯಾಗಿದೆ. ಈ ಸೇತುವೆ ಪ್ರತಿ ವರ್ಷ ಮುಳುಗಡೆಯಾಗುತ್ತಿದ್ದು, ಯಾವುದೇ ಪರ್ಯಾಯ ವ್ಯವಸ್ಥೆ ಮಾಡದ ಕಾರಣ ವಾಹನ ಸಂಚಾರ ಸ್ಥಗಿತಗೊಂಡಿದೆ. ವಾಹನಗಳು ಸೆಂಟ್ಯಾರು ಪಾಣಾಜೆ ಲೋಕೋಪಯೋಗಿ ರಸ್ತೆಯ ಮೂಲಕ ಸುತ್ತು ಬಳಸಿ ಸಂಚರಿಸಬೇಕಾಗಿದೆ. ಈ ಬಾರಿ ಸುರಿದ ಮಳೆಗೆ ಚೆಲ್ಯಡ್ಕ ಸೇತುವೆ ಮೊದಲ ಬಾರಿಗೆ ಮುಳುಗಡೆಯಾಗಿದೆ.
ಈ ಸೇತುವೆ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಕಾಯಕಲ್ಪ ಒದಗಿಸುವಂತೆ ಸ್ಥಳೀಯರು ಹಲವಾರು ಬಾರಿ ಜನಪ್ರನಿಧಿಗಳು, ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸೇತುವೆ ಮುಳುಗಡೆಯಾದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಆ ಭಾಗದ ಜನ ಪರ್ಯಾಯ ರಸ್ತೆ ಬಳಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.