ನ್ಯೂಸ್ ನಾಟೌಟ್: ಕಾಮಕುಮಾರ ನಂದಿ ಸ್ವಾಮೀಜಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಆದರೆ, ಸಿಬಿಐ ಕೇವಲ ಬುರುಡೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂದೂಗಳ ಹತ್ಯೆ ಪ್ರಕರಣಗಳನ್ನು ಸಿಬಿಐಗೆ ಕೊಟ್ಟರು, ನಂತರ ಏನಾಯ್ತು? 22 ಪ್ರಕರಣಗಳಿಗೆ ನ್ಯಾಯ ಸಿಕ್ಕಿದೆಯೇ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದೂ ವಿರೋಧಿ ವಾತಾವರಣ ಸೃಷ್ಟಿಯಾಗಿದೆ. ಆತಂಕ ಕೂಡಾ ಶುರುವಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಆತಂಕ ಇತ್ತು. ಬಿಜೆಪಿ ಇದ್ದಾಗ ಸುರಕ್ಷಿತ ಏನಿಲ್ಲ. ಅವಾಗಲೂ ಗೋ ಹತ್ಯೆ, ಹಿಂದೂ ಕಾರ್ಯಕರ್ತರು ಹತ್ಯೆ ಆಗಿದೆ. ಇಂತಹ ಪ್ರಕರಣಗಳ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ. ಇವರು ಹಿಂದೂ ಕಾರ್ಯಕರ್ತರ ಜೊತೆ ಗಟ್ಟಿಯಾಗಿ ನಿಂತಿದ್ದರೆ ಅವರನ್ನು ತಲೆ ಮೇಲೆ ಹೊತ್ತುಕೊಳ್ಳುತ್ತಿದ್ದೆವು. ಇದಕ್ಕಾಗಿ ನಿಮ್ಮನ್ನು ಕರ್ನಾಟಕದಲ್ಲಿ ನೆಲಸಮ ಮಾಡಿದ್ದಾರೆ. ಸತ್ಯಶೋಧನೆ ಹೆಸರಲ್ಲಿ ಕಾಂಗ್ರೆಸ್ ಮೇಲು ಹಾಕುತ್ತೀರಿ. ಈ ಪ್ರಕರಣಗಳನ್ನು ಸುಮ್ಮನೆ ಬಿಡುವುದಿಲ್ಲ. ಸರಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಗುಡುಗಿದರು.
ಪರೇಶ್ ಮೇಸ್ತಾ ಪ್ರಕರಣ ಯಾವ ಹಂತದಲ್ಲಿದೆ? ಬಿಜೆಪಿಯವರು ಇದೀಗ ಸಿಬಿಐಗೆ ವಹಿಸಿ ಎಂದು ಹೇಳುತ್ತಿದ್ದಾರೆ. ಇವರೇನು ಸಾಚಾಗಳಾ? ರಾಜಕಾರಣಿಗಳು ನಿರ್ಲಜ್ಜರು. ನಾನು ಹಿಂದೂತ್ವ ಉಳಿಸಲು ರಾಜಕಾರಣಕ್ಕೆ ಬಂದಿದ್ದೇನೆ. ರಾಜಕಾರಣ ಮಾಡಲಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಮಠದಲ್ಲಿ ಒಬ್ಬರೇ ಇರುತ್ತಿದ್ದರು. ಹಿರೇಖೋಡಿಯಿಂದ ಎರಡು ಕಿಲೋಮೀಟರ್ ದೂರ ಇದೆ. ಒಂಟಿತನ ನೋಡಿ ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆ. ಘಟನೆಯ ಸಂಪೂರ್ಣ ಮಾಹಿತಿಯನ್ನು ಸರ್ಕಾರ ಹೊರ ಹಾಕಬೇಕು. ಇದರ ಹಿಂದೆ ಹಣದ ಕಾರಣ ಇಲ್ಲ, ಬೇರೆ ಏನೋ ಷಡ್ಯಂತ್ರ ಇದೆ. ಕರ್ನಾಟಕ ಪೊಲೀಸರು ಕೇವಲ ನಾಲ್ಕು ಗಂಟೆಯಲ್ಲಿ ಬಂಧಿಸಿದ್ದಾರೆ. ಉತ್ತರ ಪ್ರದೇಶ ಮಾದರಿಯಲ್ಲಿ ಮೂರು ಆರೋಪಿಗಳ ಮನೆಗೆ ಬುಲ್ಡೋಜರ್ ಹತ್ತಿಸಬೇಕು ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ.