ನ್ಯೂಸ್ ನಾಟೌಟ್: ವೀಲಿಂಗ್ ಮಾಡುವ ಪುಂಡರ ಪುಂಡಾಟಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ವೀಲಿಂಗ್ ಹಾವಳಿ ಈಗ ಮೈಸೂರಿಗೂ ಕಾಲಿಟ್ಟಿದೆ. ಇದೀಗ ಮೈಸೂರಿನಲ್ಲಿ ಪುಂಡರ ವೀಲಿಂಗ್ (Wheeling in Mysore) ಶೋಕಿಗೆ ಶಾಲಾ ಶಿಕ್ಷಕಿಯೊಬ್ಬರು (School teacher injured) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೊಲೀಸರು ವೀಲಿಂಗ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದರು ಪುಂಡರ ಹಾವಳಿ ಇನ್ನೂ ನಿಂತಿಲ್ಲ. ಇವರ ಅಬ್ಬರ ಇನ್ನೂ ಕಡಿಮೆ ಆಗಿಲ್ಲ. ಮೈಸೂರಿನ ವಿವಿಧ ರಸ್ತೆಗಳಲ್ಲಿ ವೀಲಿಂಗ್ ಮಾಡುವ ಮೂಲಕ ದಾರಿಯಲ್ಲಿ ಹೋಗುತ್ತಿರುವ ಅಮಾಯಕ ಜನರ ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತಿದ್ದಾರೆ.
ಜುಲೈ 18ರಂದು ಮೈಸೂರಿನಲ್ಲಿ ನಡೆದ ಒಂದು ಘಟನೆಯಲ್ಲಿ ಒಬ್ಬರು ಶಾಲಾ ಶಿಕ್ಷಕಿ ಗಾಯಗೊಂಡಿದ್ದಾರೆ. ಗಾಯತ್ರಿಪುರಂ ಚರ್ಚ್ ಬಳಿ ಕೆಟಿಎಂ ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಮಾಡಿಕೊಂಡು ಬಂದ ಮೂವರು ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಶಿಕ್ಷಕಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ಬಳಿಕವೂ ನಿಲ್ಲಿಸದೆ ಅಲ್ಲಿಂದ ವೇಗವಾಗಿ ಪರಾರಿಯಾಗಿದ್ದಾರೆ.
ಜುಲೈ 18ರಂದು ಸಂಜೆ ಹೊತ್ತಿಗೆ ಈ ಶಿಕ್ಷಕಿ ಶಾಲೆಯಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ತ್ರಿಬಲ್ ರೈಡಿಂಗ್ ಮೂಲಕ ವೀಲಿಂಗ್ ಮಾಡುತ್ತಾ ಬಂದು ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಪರಿಣಾಮ ಶಿಕ್ಷಕಿಯ ತಲೆಗೆ ಗಾಯವಾಗಿದ್ದು ಅವರು ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿದ್ದರು.
ರಕ್ತದ ಮಡುವಿನಲ್ಲಿದ್ದ ಶಿಕ್ಷಕಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದಾರೆ. ಈಗಲೂ ಶಿಕ್ಷಕಿ ತೀವ್ರ ನಿಗಾ ಘಟಕದಲ್ಲಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸಿದ್ದಾರ್ಥ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಬೆಂಗಳೂರು ದಶಪಥ ಹೆದ್ದಾರಿಯ ಮೇಲೆಯೇ ಬೈಕ್ ವೀಲಿಂಗ್ ಮಾಡಲಾಗುತ್ತಿದೆ. ಎಕ್ಸಪ್ರೆಸ್ ವೇಯಲ್ಲಿ ವೀಲಿಂಗ್ ಮಾಡಿ ಪುಂಡಾಟ ನಡೆಸಿದ ವಿದ್ಯಮಾನ ಈಗ ನಡೆದಿದೆ. ಬಿಡದಿ ಠಾಣಾ ವ್ಯಾಪ್ತಿಯಲ್ಲಿ ಕೇತಗಾನಹಳ್ಳಿ ಬಳಿ ದಾಖಲಾಗಿದೆ. ದರ್ಶನ್ ಎಂಬಾತ ಡಿಯೋ ಸ್ಕೂಟರ್ನಲ್ಲಿ ವೀಲಿಂಗ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ. ಈ ವಿಡಿಯೊ ಆಧರಿಸಿ ಪೊಲೀಸರು ಈಗ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.