ವರದಿ: ಅಭಿಷೇಕ್ ಗುತ್ತಿಗಾರು
ನ್ಯೂಸ್ ನಾಟೌಟ್: ಕಳೆದ ಮಾರ್ಚ್ ನಲ್ಲಿ ಲೋಕಾರ್ಪಣೆಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬೆಳ್ಳಾರೆ ಪೊಲೀಸ್ ಠಾಣೆಯ ನೂತನ ಕಟ್ಟಡದ ಹಿಂಬದಿಯಲ್ಲಿ ಜರಿಯುವ ಭೀತಿ ಎದುರಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸೂಕ್ತ ಸಮಯದಲ್ಲಿ ಸರಿಪಡಿಸುವ ಭರವಸೆ ಸಿಕ್ಕಿದೆ. ಆದರೆ ಈ ಕೂಡಲೇ ಅಲ್ಲಿಗೊಂದು ಶಾಶ್ವತ ಪರಿಹಾರವನ್ನು ಸರ್ಕಾರ ಒದಗಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಮಾಚಿ ಸಚಿವ ಎಸ್ ಅಂಗಾರ ಅವರು ಬೆಳ್ಳಾರೆ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಕಳೆದ ಮಾರ್ಚ್ ನಲ್ಲಿ ಉದ್ಘಾಟಿಸಿದ್ದರು. 1.30 ಕೋಟಿ ರೂ. ವೆಚ್ಚದಲ್ಲಿ ಠಾಣೆಯನ್ನು ನಿರ್ಮಿಸಲಾಗಿತ್ತು. ಈ ಕಟ್ಟಡದ ಹಿಂಬದಿಯಲ್ಲಿ ಹೊಳೆ ಇದೆ. ಈ ಹೊಳೆ ಹರಿದು ಹೋಗುವ ಮೇಲಿನ ಭಾಗದಲ್ಲಿ ಮಣ್ಣು ಹಾಕಿ ಸ್ವಲ್ಪ ಎತ್ತರ ಮಾಡಿ ಪೊಲೀಸ್ ಸ್ಟೇಷನ್ ನಿರ್ಮಿಸಲಾಗಿದೆ. ಪೊಲೀಸ್ ಠಾಣೆ ನಿರ್ಮಿಸುವಾಗ ಇಲ್ಲಿ ಸಾಕಷ್ಟು ಮಣ್ಣು ಹಾಕಲಾಗಿದೆ. ಹೀಗೆ ಹಾಕಿದ ಮಣ್ಣು ಸ್ವಲ್ಪ ..ಸ್ವಲ್ಪವೇ ಜರಿಯುತ್ತಿದೆ. ಇದನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಇದು ಇಡೀ ಕಟ್ಟಡವನ್ನು ನುಂಗಿ ಬಿಡಬಹುದು ಅನ್ನುವ ಆತಂಕವನ್ನು ಸಿಬ್ಬಂದಿ ವ್ಯಕ್ತಪಡಿಸುತ್ತಿದ್ದಾರೆ.
ಈ ವಿಚಾರವನ್ನು ಇದೀಗ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರ ಗಮನಕ್ಕೂ ತರಲಾಗಿದೆ. ಬೆಳ್ಳಾರೆಯ ಪೊಲೀಸ್ ಅಧಿಕಾರಿಗಳು ಅವರನ್ನು ಭೇಟಿಯಾಗಿ ಶೀಘ್ರವೇ ಸಮಸ್ಯೆಯನ್ನು ಪರಿಹರಿಸಿಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿದ ಬೆಳ್ಳಾರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುಹಾಸ್ ಅವರು, ಮುಂಚೆ ಸ್ವಲ್ಪ ಹೆಚ್ಚು ಜರಿಯುತ್ತಿತ್ತು. ಆದರೆ ಆ ನಂತರ ನಾವು ಸ್ವಲ್ಪ ಮಣ್ಣು ಹಾಗೂ ಮರದ ದಿಮ್ಮಿಗಳನ್ನು ಹಾಕಿ ಅಲ್ಲಿ ಗಟ್ಟಿ ಮಾಡಿದ್ದೇವೆ. ತಾತ್ಕಾಲಿಕವಾಗಿ ಜರಿಯುವುದು ನಿಂತಿದೆ. ಆದರೆ ಮುಂದಕ್ಕೆ ಮಳೆ ಎಲ್ಲಾದರೂ ಜಾಸ್ತಿ ಆದರೆ ಕುಸಿಯುವ ಆತಂಕವಿದೆ. ಸುರಕ್ಷತೆ ದೃಷ್ಟಿಯಿಂದ ಇಲಾಖೆಗಳಿಗೆ ಸಂಬಂಧಪಟ್ಟ ವಿಷಯವನ್ನು ತಿಳಿಸಿದ್ದೇವೆ. ಸದ್ಯ ಡಿಐಜಿ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಣ್ಣ ನಿರಾವರಿ ಇಲಾಖೆಗೂ ಈ ಬಗ್ಗೆ ಮನವಿಯನ್ನೂ ನೀಡಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಅಧಿಕಾರಿಗಳ ತಂಡ ಇಲ್ಲಿಗೆ ಭೇಟಿ ನೀಡಿ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಲೆಕ್ಕಾಚಾರವನ್ನು ಹಾಕಿದೆ. ಈ ಪ್ರಕಾರವಾಗಿ ಸುಮಾರು 50 ಲಕ್ಷ ರೂ. ಖರ್ಚು ತಗುಲಬಹುದು ಎಂದು ಅಂದಾಜಿಸಲಾಗಿದೆ.