ನ್ಯೂಸ್ ನಾಟೌಟ್: ಪುತ್ತೂರಿನ ಆರ್ಯಾಪು ಗ್ರಾ.ಪಂ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಜಯಗಳಿಸಿದ ಹಿನ್ನಲೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಈ ಬೆನ್ನಲ್ಲೇ ಪೊಲೀಸರು ಅನುಮತಿ ಇಲ್ಲದೆ ಪುತ್ತಿಲ ಪರಿವಾರ ವಿಜಯೋತ್ಸವ ಆಚರಿಸಿಕೊಂಡಿದೆ ಎಂದು ಕೇಸು ದಾಖಲಿಸಿಕೊಂಡಿದ್ದಾರೆ.
ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ನಿಂತಿದ್ದ ಪುತ್ತಿಲ ಪರಿವಾರ ಆರ್ಯಾಪು ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿತ್ತು. ಇದು ಹಿಂದುತ್ವದ ಗೆಲುವು ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದರು. ಈ ನಡುವೆಯೇ ಪುತ್ತಿಲ ಪರಿವಾರದ ವಿರುದ್ಧ ಈಗ ಅನುಮತಿ ಇಲ್ಲದೆ ವಿಜಯೋತ್ಸವ ಆಚರಿಸಿದ್ದಾರೆಂದು ಪುತ್ತಿಲ ಪರಿವಾರ ಸಂಘಟನೆ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಸಾರ್ವಜನಿಕ ಶಾಂತಿಭಂಗ ಪ್ರಕರಣದಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ವಿಜಯೋತ್ಸವದ ವೇಳೆ ಡಿಜೆ ಬಳಸಿ ಪುತ್ತಿಲ ಪರಿವಾರ ಮೆರವಣಿಗೆ ನಡೆಸಿದೆ. ಮಿನಿ ವಿಧಾನಸೌಧದಿಂದ ಮುಕ್ರಂಪಾಡಿವರೆಗೆ ಡಿಜೆ ಮೆರವಣಿಗೆ ನಡೆಸಿದ್ದ ಪುತ್ತಿಲ ಪರಿವಾರ ಕಾನೂನನ್ನು ಉಲ್ಲಂಘಟನೆ ಮಾಡಿದೆ ಎಂದು ದೂರು ದಾಖಲಾಗಿದೆ.
ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯೆ ನೀಡಿದ ಅರುಣ್ ಕುಮಾರ್ ಪುತ್ತಿಲ, ದೂರು ದಾಖಲಾಗಿರುವ ಬಗ್ಗೆ ನನಗೆ ನೋಟಿಸ್ ಬಂದಿಲ್ಲ. ಈ ಬಗ್ಗೆ ನೋಟಿಸ್ ಬಂದ ನಂತರ ನಾನು ಅದಕ್ಕೆ ಉತ್ತರಿಸುತ್ತೇನೆ. ಪೊಲೀಸರು ದೂರು ಏಕೆ ದಾಖಲಿಸಿಕೊಳ್ಳುತ್ತಾರೆ..? ಚುನಾವಣೆಯಲ್ಲಿ ಗೆದ್ದ ನಂತರ ವಿಜಯೋತ್ಸವ ಆಚರಿಸುವುದು ಸಾಮಾನ್ಯ, ಅದು ಪೊಲೀಸರಿಗೆ ಗೊತ್ತಿಲ್ಲವೇ..? ಮತ್ತೇಕೆ ಅವರು ದೂರು ದಾಖಲಿಸಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ಪ್ರಶ್ನಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಆಘಾತವನ್ನೇ ನೀಡಿದ್ದರು. ಸೋಲಿನಲ್ಲೋ ವೀರೋಚಿತ ಗೆಲುವನ್ನು ಅರುಣ್ ಕುಮಾರ್ ಪುತ್ತಿಲ ಪಡೆದುಕೊಂಡಿದ್ದರು. ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲೂ ಪುತ್ತಿಲ ಪರಿವಾರದಿಂದ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಹೀಗಾಗಿ ಬಿಜೆಪಿ ಅಲ್ಲೂ ಕೂಡ ದೊಡ್ಡ ಮುಖಭಂಗ ಅನುಭವಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.