ನ್ಯೂಸ್ ನಾಟೌಟ್: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶರವೇಗದಲ್ಲಿ ಲಕ್ಷಾಂತರ ಜನರ ಹೃದಯ ಗೆದ್ದು ಅಲ್ಪ ಮತಗಳ ಅಂತರದಿಂದ ಸೋತಿದ್ದ ಅರುಣ್ ಕುಮಾರ್ ಪುತ್ತಿಲ ಮುಂಬರುವ ಲೋಕಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೆ ಅರುಣ್ ಪುತ್ತಿಲರಿಗೆ ಬಿಜೆಪಿಯಿಂದ ಟಿಕೆಟ್ ತಪ್ಪಿಸುವುದಕ್ಕೆ ಸರ್ವ ಪ್ರಯತ್ನಗಳನ್ನು ತೆರೆಮರೆಯಲ್ಲಿ ನಡೆಸಲಾಗುತ್ತಿದೆ. ಹೊಸ ಹೆಸರನ್ನು ಮುನ್ನೆಲೆಗೆ ತರಲು ಬಿಜೆಪಿಯೊಳಗಿನ ಕೆಲವು ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ಟ್ರೋಲ್ಗೆ ಒಳಗಾಗಿರುವ ನಳಿನ್ ಕುಮಾರ್ ಕಟೀಲ್ಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗುವುದು ಬಹುತೇಕ ಅನುಮಾನ. ಈ ಸಲ ಹೊಸ ಮುಖಕ್ಕೆ ಅವಕಾಶ ನೀಡುವುದಕ್ಕೆ ಎಲ್ಲ ತಯಾರಿ ನಡೆದಿದೆ. ಈ ವಿಚಾರ ಬಹಳಷ್ಟು ದಿನಗಳಿಂದ ಜಾಲತಾಣಗಳಲ್ಲಿಯೂ ಚರ್ಚೆಯಾಗಿದ್ದನ್ನು ಗಮನಿಸಿದ್ದೇವೆ.
ಈ ನಡುವೆ ‘ದೇಶಕ್ಕೆ ಮೋದಿ ಊರಿಗೆ ಪುತ್ತಿಲ’ ಎಂಬ ಘೋಷಣೆ ಮೊಳಗಿದ್ದವು. ಪುತ್ತಿಲರಿಗೆ ಬಿಜೆಪಿಯಿಂದ ಸಂಸತ್ ಚುನಾವಣೆಗೆ ಟಿಕೆಟ್ ಕೊಡಬೇಕು ಅನ್ನುವ ಕೂಗು ಹೆಚ್ಚಾದವು. ಪುತ್ತಿಲ ಪರಿವಾರದ ಈ ಕೂಗು ರಾಷ್ಟ್ರಮಟ್ಟದಲ್ಲಿಯೂ ದೊಡ್ಡ ಸುದ್ದಿಯಾಗಿತ್ತು. ಆದರೆ ಇದೀಗ ಬಿಜೆಪಿಯೊಳಗಿನ ಕೆಲವು ಹಿರಿಯ ನಾಯಕರು ಸಂಘ ಪರಿವಾರದ ನಾಯಕರ ಜೊತೆಗೂಡಿ ಪುತ್ತಿಲರಿಗೆ ಟಿಕೆಟ್ ತಪ್ಪಿಸುವುದಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ ಅನ್ನುವ ಮಾಹಿತಿಗಳು ಹೊರಬಿದ್ದಿದೆ. ಪುತ್ತಿಲ ಬದಲಿಗೆ ಪ್ರಭಾವಿ ವಕೀಲರಾಗಿರುವ ಅರುಣ್ ಶ್ಯಾಮ್ ಹೆಸರನ್ನು ಮುನ್ನೆಲೆಗೆ ತರಲು ಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅರುಣ್ ಶ್ಯಾಮ್ ಪ್ರಭಾವಿ ವಕೀಲರಾಗಿದ್ದಾರೆ. ಹಲವಾರು ಕೇಸ್ಗಳಲ್ಲಿ ಮಠಗಳು ಸೇರಿದಂತೆ ಹಲವು ಪ್ರಭಾವಿ ನಾಯಕರ ಪರ ವಾದಿಸಿದವರು. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರಂತಹ ನಾಯಕರ ಆತ್ಮೀಯರಾಗಿದ್ದು ಅವರ ಆಶೀರ್ವಾದವಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರ ಒಡನಾಟ ಚೆನ್ನಾಗಿದೆ. ಹವ್ಯಕ ಸಮುದಾಯದ ಅರುಣ್ ಶ್ಯಾಮ್ ಅವರಿಗೆ ಅವಕಾಶ ನೀಡಿದರೆ ಹೇಗೆ ಅನ್ನುವಂತಹ ಚರ್ಚೆಗಳು ಬಿಜೆಪಿಯೊಳಗೆ ನಡೆಯುತ್ತಿವೆ.
ಅರುಣ್ ಶ್ಯಾಮ್ ಅವರು ಎಂ. ಈಶ್ವರ ಭಟ್ ಮತ್ತು ಕುಸುಮ ಈಶ್ವರ ಭಟ್ರವರ ಪುತ್ರರಾಗಿದ್ದಾರೆ. ಸದ್ಯ ಅರುಣ್ಶ್ಯಾಮ್ ಪತ್ನಿ ಸುಷ್ಮಾ ಅರುಣ್ ಶ್ಯಾಮ್, ಮಕ್ಕಳು ಆದ್ಯಶ್ರೀ, ಅಮೃತಶ್ರೀ ಹಾಗೂ ಅದ್ವಿತಾಶ್ರೀಯವರೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಾನೂನಿನ ವಿಷಯದಲ್ಲಿ ಅಧ್ಯಯನ ಮಾಡಿ ಸಲ್ಲಿಸಿದ್ದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಸಿಕ್ಕಿದೆ. ಕರ್ನಾಟಕ ಕಾನೂನು ಆಯೋಗದ ಮುಖ್ಯಸ್ಥರಾದ ಕೇರಳ ಉಚ್ಛ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಸ್. ಆರ್. ಬನ್ನೂರಮಠ, ಸಚಿವ ಸಿ. ಎನ್. ಅಶ್ವತ್ ನಾರಾಯಣ್ ಅವರಂತಹ ಪ್ರಮುಖರ ಉಪಸ್ಥಿತಿಯಲ್ಲಿ ಅರುಣ್ ಶ್ಯಾಮ್ ಅವರಿಗೆ ಗೌರವ ಸಲ್ಲಿಸಲಾಗಿತ್ತು.
ಮೂಲತ ಕೊಳ್ನಾಡು ಗ್ರಾಮದ ಪಂಜಿಗದ್ದೆ ನಿವಾಸಿ ಆಗಿರುವ ಅರುಣ್ ಶ್ಯಾಮ್ ಅವರು 2006ರಲ್ಲಿ ಪುತ್ತೂರಿನ ಈಶ್ವರಮಂಗಲ ನಿವಾಸಿ ಕೆ.ಎಂ. ನಟರಾಜ್ ಅವರ ಜೊತೆ ಬೆಂಗಳೂರು ಹೈಕೋರ್ಟ್ನಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ಮುಂದೆ ಸ್ವಂತ ಕಚೇರಿ ಆರಂಭಿಸಿ ವಕೀಲಿ ವೃತ್ತಿ ಮುಂದುವರಿಸಿದ್ದರು. ಬೆಂಗಳೂರಿನ ಅಲಯನ್ಸ್ ಯುನಿವರ್ಸಿಟಿಯಲ್ಲಿ ಪಿಎಚ್ಡಿ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅರುಣ್ಶ್ಯಾಮ್ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾರ್ಯಕರ್ತರ ಬಲದಿಂದಲೇ ಮೇಲೆ ಬಂದಿರುವ ಅರುಣ್ ಪುತ್ತಿಲಗೆ ದೊಡ್ಡ ಅಭಿಮಾನಿ ಬಳಗವಿದೆ. ಅರುಣ್ ಪುತ್ತಿಲಗೆ ಟಿಕೆಟ್ ಕೊಡಬೇಕು ಅನ್ನುವ ಒತ್ತಾಯವೂ ಇದೆ. ಆದರೆ ಪ್ರಭಾವಿಗಳ ಒಡನಾಟ ಹೊಂದಿದ ಹಾಗೂ ಸಂಘ ಪರಿವಾರದ ಒತ್ತಡದಿಂದಾಗಿ ಕೊನೆಗಳಿಗೆಯಲ್ಲಿ ಅರುಣ್ಶ್ಯಾಮ್ ಗೆ ಟಿಕೆಟ್ ಲಭಿಸಿದರೂ ಅಚ್ಚರಿ ಇಲ್ಲ ಅನ್ನುವಂತಹ ಮಾತುಗಳು ಕೂಡ ಕೇಳಿ ಬರುತ್ತಿದೆ. ಒಂದು ವೇಳೆ ಅರುಣ್ ಪುತ್ತಿಲಗೆ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗದಿದ್ದರೆ ಅವರು ಮತ್ತೆ ಪಕ್ಷೇತರರಾಗಿ ಕಣಕ್ಕೆ ಇಳಿಯಬಹುದು. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣಾ ಕಣ ರೋಚಕತೆಯನ್ನು ಪಡೆದುಕೊಳ್ಳುತ್ತೆ. ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಗೆಲುವು ಅಷ್ಟು ಸುಲಭವಾಗಿರುವುದಿಲ್ಲ ಅನ್ನುವುದಂತೂ ನಿಜ.