ನ್ಯೂಸ್ ನಾಟೌಟ್ ಪುತ್ತೂರು: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಉತ್ತಮ ನಿರ್ಣಯ ಕೈಗೊಂಡಿರುವುದು ಸಂತೋಷದ ವಿಚಾರ. ಇದಕ್ಕಿಂತಹ ಉತ್ತಮ ಅವಕಾಶ ಬೇರೊಂದಿಲ್ಲ ಎಂದು ನಿವೃತ್ತ ಏರ್ ವೇಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಹೇಳಿದರು.
ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ವತಿಯಿಂದ ಭಾನುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಭಾರತೀಯ ಸೇನೆಗೆ ಸೇರುವ ಅಭ್ಯರ್ಥಿಗಳಿಗೆ ಗ್ರೌಂಡ್ ತರಬೇತಿ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸೇನೆಗೆ ಸೇರುವುದರಿಂದ ಜೀವನ ಸಾರ್ಥಕವಾಗುವುದರ ಜತೆಗೆ ಉತ್ತಮ ಸೇವೆ ನೀಡುವ ಅವಕಾಶ ಲಭಿಸುತ್ತದೆ. ಜತೆಗೆ ದೈಹಿಕ, ಮಾನಸಿಕ ಬದಲಾವಣೆಯಾಗುತ್ತದೆ. ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ಮನೋಭಾವ ಇಟ್ಟುಕೊಳ್ಳಿ ಎಂದು ಕಾರ್ಯಾಗಾರದಲ್ಲಿ ಪಾಲ್ಗೊಂಡ ಯುವಕ-ಯುವತಿಯರಿಗೆ ಕಿವಿಮಾತು ಹೇಳಿದರು.
ವಿದ್ಯಾಮಾತಾ ಅಕಾಡೆಮಿ ಸಂಚಾಲಕ ಭಾಗ್ಯೇಶ್ ರೈ ಪ್ರಾಸ್ತಾವಿಕ ಮಾತನಾಡಿ, ಸೇನಾ ನೇಮಕಾತಿ ಆಯ್ಕೆಗೆ ಪ್ರಯತ್ನ ಪಡುವವರಿಗೆ ಅಥವಾ ಅಗ್ನಿಪಥ್ಗೆ ಆಯ್ಕೆಯಾಗುವವರಿಗೆ ಮಾಹಿತಿ ಇರುವುದಿಲ್ಲ. ಈ ಬಾರಿ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲು ಪರೀಕ್ಷೆ ಬಳಿಕ ಗ್ರೌಂಡ್ ಆಯ್ಕೆ ಇರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾಮಾತಾ ಅಕಾಡೆಮಿ ವತಿಯಿಂದ ಪ್ರಥಮ ಹಂತರ ಪೂರ್ವಭಾವಿ ತಯಾರಿ ಮಾಡಿದ್ದೇವೆ. ನೇಮಕಾತಿ ಬಯಸುವವರಿಗೆ ದೇಹರ್ಡಾಧ್ಯತೆ ಸಹಿತ ಮತ್ತಿತರ ಮಾಹಿತಿ ಹೇಗಿರಬೇಕು ಎಂದು ನೀಡಲಾಗುತ್ತಿದೆ. ಪ್ರಾಥಮಿಕ ಹಂತದಿಂದಲೇ ಈ ಕುರಿತು ಜಾಗೃತಿ ಮೂಡಿದರೆ ಸುಲಭವಾಗುತ್ತದೆ ಎಂದರು.
ಕಳೆದ ಬಾರಿ ವಿದ್ಯಾಮಾತಾ ಅಕಾಡೆಮಿಯಿಂದ 9 ಜನ ಅಗ್ನಿಪಥ್ಗೆ ಆಯ್ಕೆಯಾಗಿದ್ದಾರೆ. ಈ ಕುರಿತು ಮಾಹಿತಿ ಇಲ್ಲದವರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. 120 ಮಕ್ಕಳು ಪಾಲ್ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸೈನ್ಯಕ್ಕೆ ಸೇರಬೇಕು, ಅಧಿಕಾರಿಗಳಾಗಬೇಕು ಎಂಬ ನಿಟ್ಟಿನಲ್ಲಿ ನಾವು ಒಂದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ನಿವೃತ್ತ ಸೈನಿಕ, ವಿದ್ಯಾಮಾತಾ ಅಕಾಡೆಮಿ ಗೌರವ ಸಲಹೆಗಾರ ಗೋಪಾಲಕೃಷ್ಣ ಕಾಂಚೋಡು ಅವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗ್ರೌಂಡ್ ತರಬೇತಿಯಲ್ಲಿ ಫೈನಲ್ ಹಂತಕ್ಕೆ ತಲುಪಿದವರಿಗೆ ಸ್ಮರಣಿಕೆ ನೀಡಲಾಯಿತು.
ನಿವೃತ್ತ ಸೈನಿಕ ವೆಂಕಪ್ಪ ಗೌಡ, ಯುವಜನ ಸೇವಾ ಕ್ರೀಡಾ ಇಲಾಖೆ ಮೇಲ್ಷಿಚಾರಕ ಶ್ರೀಕಾಂತ್ ಬಿರಾವು, ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ, ನಿವೃತ್ತ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಯಾನಂದ ರೈ ಕೋರ್ಮಂಡ, ತರಬೇತುದಾರರಾದ ವಿಜೇತ್, ಪೂರ್ಣಿಮಾ ಉಪಸ್ಥಿತರಿದ್ದರು.