ನ್ಯೂಸ್ ನಾಟೌಟ್: ಸ್ವಾಮಿ ಕೊರಗಜ್ಜನ ಮಹಿಮೆ ಅಪಾರ. ಕರಾವಳಿಯ ಜನರ ಆರಾಧ್ಯ ದೈವವಾಗಿ ನಂಬಿಕೆಯ ಶಕ್ತಿಯಾಗಿರುವ ಕುತ್ತಾರು ಪದವಿನ ಕೊರಗಜ್ಜನ ಕಾರ್ಣಿಕವೇ ಈಗ ಮನೆಮನೆಯ ಮಾತಾಗಿದೆ. ತುಳುನಾಡಿನಾದ್ಯಂತ ಅನೇಕ ಕೊರಗಜ್ಜನ ಕ್ಷೇತ್ರಗಳಿವೆ. ಅಂತಹ ಕ್ಷೇತ್ರಗಳ ಪೈಕಿ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಮಣ್ಣಿನ ಸ್ವಾಮಿ ಕೊರಗಜ್ಜ ಕ್ಷೇತ್ರವೂ ಒಂದು.
ಈ ಪುಣ್ಯ ಕ್ಷೇತ್ರದ ಸತ್ಯ ದೈವ ಕೊರಗಜ್ಜನ ಮಹಿಮೆಯನ್ನು ಸಾರುವ ‘ಭಾಗ್ಯೊದೈಸಿರಿ’ ಎಂಬ ಭಕ್ತಿ ಗೀತೆಯೊಂದು ಇತ್ತೀಚಿಗೆ ಬೆಳ್ಳಾರೆ ಸಮೀಪದ ಅಂಕತ್ತಡ್ಕದಲ್ಲಿ ಬಿಡುಗಡೆಯಾಗಿದೆ. ದೈವನರ್ತಕ ವಿಜಯ್ ಬೆಳ್ಳೂರು ಗೀತೆಯನ್ನು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಕೃಷ್ಣ ಅಂಕತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.
ಈ ಭಕ್ತಿಗೀತೆಗೆ ಉಮಾನಾಥ್ ಕೋಟ್ಯಾನ್ ತೆಂಕಕಾರಂದೂರು ಸಾಹಿತ್ಯ ಬರೆದಿದ್ದಾರೆ. ರಕ್ಷಿತ್ ಪೂಜಾರಿ ಛಾಯಾಗ್ರಹಣವಿದೆ. ಯುವ ಗಾಯಕರಾದ ಮಹೇಶ್ ಪಡುಮಲೆ, ಯಕ್ಷಿತಾ ಎಂ. ಧ್ವನಿಯಾಗಿದ್ದಾರೆ. ಸಂತೋಷ್ ಪುಚ್ಚೇರ್ ಪ್ರಚಾರ ಕಲೆ, ಸಂಕಲನ ಮಾಡಿದ್ದಾರೆ.
ಇಲ್ಲಿಗೆ ದೂರದೂರುಗಳಿಂದ ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವಂತೆ ಭಕ್ತಿಯಿಂದ ಬರುತ್ತಾರೆ. ಇಲ್ಲಿಗೆ ಬಂದು ಹರಕೆ ಹೊತ್ತ ಭಕ್ತರ ಕಷ್ಟಗಳು ನಿವಾರಣೆಯಾದ ಸಾಕಷ್ಟು ನಿದರ್ಶನಗಳಿವೆ. ತಿಂಗಳ ಪ್ರತಿ ಸಂಕ್ರಮಣದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಮ್ಮ ಕಷ್ಟಗಳನ್ನು ಹೊತ್ತು ಅಜ್ಜನ ಸನ್ನಿಧಿಗೆ ಬರುತ್ತಾರೆ. ಅಜ್ಜನಲ್ಲಿ ಪ್ರಾರ್ಥಿಸಿ ಕ್ಷೇತ್ರದಲ್ಲಿ ನೀಡುವ ಕರಿಗಂಧ ಪ್ರಸಾದ ಪಡೆಯುತ್ತಾರೆ.