ನ್ಯೂಸ್ ನಾಟೌಟ್: ಅನಾರೋಗ್ಯದಿಂದ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಸ್ಪಂದಿಸದೆ ಎಂಟು ತಿಂಗಳ ಮಗುವೊಂದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಗುವನ್ನು 4 ನೆಕ್ಕಿಲಾಡಿ ಗ್ರಾಮದ ಸಂತ್ಯಡ್ಕ ನಿವಾಸಿಗಳಾದ ಶ್ರೀಧರ ನಾಯ್ಕ ಮತ್ತು ಚಿತ್ರಾ ದಂಪತಿಯ ಪುತ್ರ ಜೀವಿತ್ ಎಂದು ಗುರುತಿಸಲಾಗಿದೆ. ತೀವ್ರ ಜ್ವರದ ಕಾರಣ ಜೀವಿತ್ನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಸ್ಪಂದಿಸದೆ ಜುಲೈ 1 ರಂದು ಮಗು ಸಾವನ್ನಪ್ಪಿದೆ. ಆದರೆ ಮಗುವಿನ ಸಾವಿಗೆ ತಂದೆಯೇ ಕಾರಣ ಎಂದು ಶಂಕೆ ವ್ಯಕ್ತಪಡಿಸಿ ಪತ್ನಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜುಲೈ 2 ರಂದು ಚಿತ್ರಾ ತನ್ನ ಮಗುವಿನ ಮರಣದ ಕುರಿತು ಸಂಶಯ ವ್ಯಕ್ತಪಡಿಸಿ ಪತಿಯ ಮೇಲೆ ದೂರು ದಾಖಲಿಸಿದ್ದಾರೆ. ಮೃತ ಮಗು ಜೀವಿತ್ನ ತಾಯಿ ಚಿತ್ರಾ ತಮ್ಮ ದೂರಿನಲ್ಲಿ, “ಜ್ವರದಿಂದ ಬಳಲುತ್ತಿದ್ದ ಮಗುವಿನೊಂದಿಗೆ ನಾನು ನನ್ನ ತವರು ಮನೆಗೆ ಹೋಗುತ್ತೇನೆ ಎಂದು ನನ್ನ ಪತಿಗೆ ಹೇಳಿದಾಗ ಪತಿ ಶ್ರೀಧರ ಕೋಪಗೊಂಡು ಜಗಳವಾಡಿ ನನ್ನನ್ನು ತಳ್ಳಿದ್ದು, ಈ ವೇಳೇ ನಾನು ಮಗುವಿನೊಂದಿಗೆ ಕೆಳಗೆ ಬಿದ್ದೆ. ನಂತರ ಮಗುವಿಗೆ ಜ್ವರ ಹೆಚ್ಚಾಯಿತು. ನನ್ನ ಪತಿ ನನ್ನನ್ನು ತಳ್ಳಿದಾಗ ಬಿದ್ದ ಕಾರಣ ನನ್ನ ಮಗುವಿನ ಸಾವಿಗೆ ಕಾರಣವಾಗಿರಬಹುದು” ಎಂದು ದೂರಿದ್ದಾರೆ.
ಪೊಲೀಸರು ಶ್ರೀಧರ ನಾಯ್ಕ ಅವರನ್ನು ವಿಚಾರಿಸಿದ್ದು ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಪೊಲೀಸರ ಕೈ ಸೇರಬೇಕಿದೆ. ಅನಂತರ ಸ್ಪಷ್ಟ ಕಾರಣ ತಿಳಿದು ಬರಲಿದೆ.