ನ್ಯೂಸ್ ನಾಟೌಟ್ : ಸಹಾಯ ಮಾಡಿದ ಗಂಡನನ್ನೇ ಪತ್ನಿ ಮರೆತು ಆತನನ್ನು ತೊರೆದಿದ್ದಾಳೆ ಎನ್ನುವ ವಿಚಾರವೊಂದು ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಪತ್ನಿಗೆ ಓದಿ ಸರ್ಕಾರಿ ಅಧಿಕಾರಿಯಾಗಬೇಕೆಂಬುದಾಗಿ ದೊಡ್ಡ ಕನಸಿತ್ತು.ಆಕೆಗಾಗಿ ನಾನು ಎಲ್ಲಾ ರೀತಿಯ ಸಹಾಯವನ್ನು ಮಾಡಿದ್ದೇನೆ. ಇದೀಗ ಆಕೆ ಸರ್ಕಾರಿ ಉದ್ಯೋಗಿಯಾದ ಬಳಿಕ ನನ್ನನ್ನು ತೊರೆದಿದ್ದಾಳೆ ಎಂದು ಪತಿ ಪತ್ನಿ ಕುರಿತು ಆರೋಪವನ್ನು ಮಾಡಿದ್ದಾನೆ.ಆದರೆ ನಿಜವಾದ ವಿಷಯವೇನು?ಇಲ್ಲಿದೆ ಮಾಹಿತಿ..
ಹೌದು, ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಪ್ರಯಾಗ್ರಾಜ್ ನ ಮೇಜಾದಲ್ಲಿ . ತನ್ನ ಪತ್ನಿ ರೇಷ್ಮಾ ಯುಪಿ ಪೊಲೀಸ್ ನಲ್ಲಿ ಕಾನ್ಸ್ಟೇಬಲ್ ಆಗಿ ಆಯ್ಕೆಯಾದ ಬಳಿಕ ತನ್ನನ್ನು ತೊರೆದಿದ್ದಾಳೆ ಎಂದು ಪತಿ ರವೀಂದ್ರ ಆರೋಪಿಸಿದ್ದಾರೆ.
ನನ್ನ ಪತ್ನಿ ರೇಷ್ಮಾಳಿಗೆ ಯುಪಿ ಪೊಲೀಸ್ ನಲ್ಲಿ ಕಾನ್ಸ್ಟೇಬಲ್ ಆಗುವ ಕನಸು ಇತ್ತು. ಆಕೆ ಕನಸು ನನಸು ಮಾಡಬೇಕೆನ್ನುವುದೇ ನನ್ನ ಉದ್ದೇಶವಾಗಿತ್ತು. ಅದಕ್ಕಾಗಿ ನಾನು ಆಕೆಯ ಶಿಕ್ಷಣಕ್ಕಾಗಿ ನನ್ನ ಒಂದು ಜಮೀನು ಮಾರಿದ್ದು,ಪದವಿ ಶುಲ್ಕ ಪಾವತಿಸಿ ಆಕೆಯ ಶಿಕ್ಷಣಕ್ಕೆ ಬೆಂಬಲ ನೀಡಿದ್ದೇನೆ ಎಂದು ರವೀಂದ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಪತ್ನಿ ರೇಷ್ಮಾ “ರವೀಂದ್ರ ನನ್ನ ಮೇಲೆ ಅನೇಕ ಬಾರಿ ದೈಹಿಕವಾಗಿ ಹಲ್ಲೆಗೈದಿದ್ದಾರೆ. ಅವಮಾನ ಮಾಡಿದ್ದಾರೆ. ಎಲ್ಲರ ಮುಂದೆ ಮಾತನಾಡುವುದು ಬೇಡ ಎಂದು ಮೌನವಾಗಿದ್ದೆ. ಅವರು ಮಾಡಿರುವ ಆರೋಪಗಳೆಲ್ಲ ನಿರಾಧಾರವಾಗಿದೆ” ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
2017 ರಲ್ಲಿ ಮದುವೆಯಾದ ಬಳಿಕ ರವೀಂದ್ರ – ರೇಷ್ಮಾ ಅವರ ಸಂಬಂಧ ಒಂದು ವರ್ಷದವರೆಗೂ ಚೆನ್ನಾಗಿಯೇ ಇತ್ತು. ಈ ಸಂದರ್ಭದಲ್ಲಿ ರವೀಂದ್ರ ಉತ್ತರ ಪ್ರದೇಶದ ಹೊರಗಿರುವ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ರೇಷ್ಮಾ ಮನೆಯಲ್ಲಿಯೇ ಇದ್ದು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ. ರೇಷ್ಮಾ ಯುಪಿ ಪೊಲೀಸ್ ನಲ್ಲಿ ಆಯ್ಕೆಯಾದ ಬಳಿಕ ಆಕೆ ನನ್ನಿಂದ ಅಂತರ ಕಾಯ್ದುಕೊಂಡಳು ಎಂದು ರವೀಂದ್ರ ಹೇಳುತ್ತಾರೆ.
ಪತ್ನಿಯನ್ನು ನಾನು ಕ್ಷಮಿಸಲು ಸಿದ್ದನಾಗಿದ್ದೇನೆ. ಆಕೆ ನನ್ನೊಂದಿಗೆ ಮತ್ತೆ ಬರಲಿ ಎಂದು ಹೇಳುತ್ತಿದ್ದಾರೆ ಪತಿ ರವೀಂದ್ರ ಅವರು.ಅವಳನ್ನು ಮಗಳಂತೆ ನೋಡಿಕೊಂಡೆವು. ಆಕೆಗೆ ಶಿಕ್ಷಣ ಕೊಡಿಸಿದೆವು. ರೇಷ್ಮಾ ಹಿಂತಿರುಗಲು ನಿರ್ಧರಿಸಿದರೆ ಭವಿಷ್ಯದ ಯಾವುದೇ ಕೌಟುಂಬಿಕ ಸಮಸ್ಯೆಗಳನ್ನು ತಪ್ಪಿಸಲು ನಾವು ಇನ್ನೂ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದೇವೆ ಎಂದು ರವೀಂದ್ರವರ ತಾಯಿ ಹೇಳುತ್ತಿದ್ದಾರೆ.
ತನ್ನ ಪತಿಯೊಂದಿಗೆ ಮತ್ತೆ ಒಂದಾಗಲು ನೀವು ಸಿದ್ಧರಿದ್ದೀರಾ ಎಂದು ಪತ್ನಿ ರೇಷ್ಮಾ ಅವರಲ್ಲಿ ಪ್ರಶ್ನೆಯಿಟ್ಟಾಗ, ರವೀಂದ್ರ ತನಗೆ ಮಾಡಿದ ಅವಮಾನಕ್ಕೆ ಕ್ಷಮೆ ಕೇಳ ಬೇಕು. ಮಾತ್ರವಲ್ಲ ಆತ ತನ್ನನ್ನು ಗೌರವದಿಂದ ನಡೆದುಕೊಂಡರೆ ಆತನೊಂದಿಗೆ ಹೋಗಲು ಸಿದ್ದಳಾಗಿದ್ದೇನೆ ಎಂದು ರೇಷ್ಮಾ ಹೇಳುತ್ತಿದ್ದಾರೆ.