ನ್ಯೂಸ್ ನಾಟೌಟ್: ಅಮೆರಿಕ ಸರ್ಕಾರದ ವಶದಲ್ಲಿ ಮಾನವಯೇತರ ಜೀವಿಗಳ ದೇಹಗಳು ಇವೆ ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿ ಡೇವಿಡ್ ಗ್ರುಸ್ಚ್ ಹೇಳಿದ್ದಾರೆ. ವಾಷಿಂಗ್ಟನ್ನಲ್ಲಿ ಬುಧವಾರ ಸದನ ಮೇಲ್ವಿಚಾರಣಾ ಸಮಿತಿಯೊಂದರ ಮುಂದೆ ಗ್ರುಸ್ಚ್ ಅವರು ಪ್ರಮಾಣ ಮಾಡಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಅನ್ಯಗ್ರಹ ಜೀವಿಗಳ ನೌಕೆಯನ್ನು ಅಮೆರಿಕ ಸರ್ಕಾರ ತನ್ನ ಬಳಿ ಇರಿಸಿಕೊಂಡಿದೆ ಎಂದು ಗ್ರುಸ್ಚ್ ಜೂನ್ನಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರಿಂದ ವಿವರಣೆ ಪಡೆದುಕೊಳ್ಳಲಾಗಿದೆ ಎಂದು ಅಮೇರಿಕಾದ ತನಿಖಾ ಸಂಸ್ಥೆ ತಿಳಿಸಿತ್ತು.
ಡೇವಿಡ್ ಗ್ರುಸ್ಚ್ 2023 ರವರೆಗೂ ಅಮೆರಿಕದ ರಕ್ಷಣಾ ಇಲಾಖೆಯ ಸಂಸ್ಥೆಯಲ್ಲಿ ವಿವರಿಸಲಾಗದ ಅಸಂಗತ ವಿದ್ಯಮಾನಗಳ (ಯುಎಪಿ) ವಿಶ್ಲೇಷಣೆಯ ನೇತೃತ್ವ ವಹಿಸಿದ್ದರು. ಅನ್ಯಗ್ರಹ ಜೀವಿಗಳ ಪುರಾವೆಗಳನ್ನು ಅಮೆರಿಕ ಕಾಂಗ್ರೆಸ್ನಿಂದ ಸರ್ಕಾರವು ಮುಚ್ಚಿಡುತ್ತಿದೆ ಎಂದು ಜೂನ್ನಲ್ಲಿ ಗ್ರುಸ್ಚ್ ಆರೋಪಿಸಿದ್ದರು. ಅವರ ಈ ಹೇಳಿಕೆ ದೇಶದಲ್ಲಿ ತೀವ್ರ ಸಂಚಲನ ಉಂಟುಮಾಡಿತ್ತು. ಅವರ ಹೇಳಿಕೆ ಕುರಿತಂತೆ ತನಿಖೆ ನಡೆಸಲು ರಿಪಬ್ಲಿಕ್ ಪಕ್ಷದ ನೇತೃತ್ವದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿತ್ತು.
ಅಪಘಾತಗೊಂಡ ನೌಕೆ’ಗಳಲ್ಲಿದ್ದ ಮಾನವಯೇತರ ಜೀವಿಗಳ ರೀತಿ ಇದ್ದ ಪೈಲಟ್ಗಳು ಅಮೆರಿಕ ಸರ್ಕಾರದ ಬಳಿ ಇದ್ದಾರೆಯೇ ಎಂಬ ಪ್ರಶ್ನೆಗೆ, “ಸರ್ಕಾರ ವಶಪಡಿಸಿಕೊಂಡ ಕೆಲವು ವಸ್ತುಗಳ ಜತೆಗೆ ಜೀವಿಗಳೂ ಇದ್ದವು. ಈ ಜೀವಿಗಳು ಮನುಷ್ಯೇತರ ದೇಹಗಳಾಗಿವೆ. ಈ ವಿಚಾರದ ಬಗ್ಗೆ ‘ನೇರ ತಿಳಿವಳಿಕೆ’ ಇರುವ ವ್ಯಕ್ತಿಗಳು ಇದನ್ನು ಖಚಿತಪಡಿಸಿದ್ದಾರೆ” ಎಂದು ಗ್ರುಸ್ಚ್ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.
ಸರ್ಕಾರವು ‘ಮಾನವೇತರ’ ಜೀವಿಯ ದೇಹಗಳನ್ನು ವಶಪಡಿಸಿಕೊಂಡಿದೆ ಎಂದು ಸಂಸದರ ಸಮಿತಿ ಮುಂದೆ ಹೇಳಿರುವ ಅವರು, ಏಲಿಯನ್ ದೇಹವನ್ನು ತಾವು ಎಂದಿಗೂ ಕಂಡಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ತಾವು ಪ್ರತಿಪಾದಿಸಿರುವ ಅನ್ಯಗ್ರಹ ನೌಕೆಯನ್ನು ಕೂಡ ಸ್ವತಃ ಕಣ್ಣಾರೆ ಕಂಡಿಲ್ಲ. ಆದರೆ ಈ ಎಲ್ಲಾ ಹೇಳಿಕೆಗಳೂ ಉನ್ನತ ಮಟ್ಟದ ಗುಪ್ತಚರ ಅಧಿಕಾರಿಗಳ ಜತೆಗಿನ ವಿಸ್ತೃತ ಸಂದರ್ಶನಗಳ ಆಧಾರವಿದೆ ಎಂದಿದ್ದಾರೆ.
“ನನ್ನ ಅಧಿಕೃತ ಕರ್ತವ್ಯದ ಸಂದರ್ಭದಲ್ಲಿ, ಹಲವು ವರ್ಷಗಳ ಹಿಂದೆ ಪತನಗೊಂಡ ಯುಎಪಿಯ ಅವಶೇಷಗಳ ವಶ ಮತ್ತು ರಿವರ್ಸ್ ಎಂಜಿನಿಯರಿಂಗ್ ಕಾರ್ಯಕ್ರಮಗಳ ಬಗ್ಗೆ ನನಗೆ ಮಾಹಿತಿ ಸಿಕ್ಕಿತ್ತು. ನಾನು ಸಂಗ್ರಹಿಸಿದ ವಿವರಗಳ ಆಧಾರದಲ್ಲಿ ಈ ಮಾಹಿತಿಯನ್ನು ನನ್ನ ಮೇಲಿನ ಅಧಿಕಾರಿಗಳಿಗೆ ಮತ್ತು ಹಲವಾರು ಇನ್ಸ್ಪೆಕ್ಟರ್ಸ್ ಜನರಲ್ಗಳಿಗೆ ನೀಡುವ ನಿರ್ಧಾರ ಮಾಡಿದ್ದೆ” ಎಂದು ಅವರು ಹೇಳಿದ್ದಾರೆ. ಮಾಹಿತಿಯು ಬಹಳ ಸೂಕ್ಷ್ಮವಾಗಿರುವುದರಿಂದ ಸಾರ್ವಜನಿಕವಾಗಿ ಅದನ್ನು ಹೇಳುವುದು ಸಾಧ್ಯವಿಲ್ಲ ಎಂದು ಸಮಿತಿ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರ ಪುರಾವೆಗಳನ್ನು ಅಡಗಿಸಿ ಇರಿಸಲಾಗಿದೆ ಎಂಬ ಗ್ರುಸ್ಚ್ ಅವರ ಹೇಳಿಕೆಯನ್ನು ನಿರಾಕರಿಸಿದೆ.