ನ್ಯೂಸ್ ನಾಟೌಟ್: ಕೆಲವು ಸಲ ದುರಂತಗಳು ನಡೆದಾಗ ಜಾತಿ ಧರ್ಮವನ್ನು ಲೆಕ್ಕಿಸದ ಜನ ಸಹಾಯಕ್ಕೆ ಮುಂದಾಗುತ್ತಾರೆ. ಇಂತಹ ಘಟನೆಗಳಿಂದ ಮಾನವ ಧರ್ಮಕ್ಕಿಂತ ಶ್ರೇಷ್ಠವಾದ ಮತ್ತೊಂದು ಧರ್ಮವಿಲ್ಲ ಅನ್ನುವ ಮಾತು ನಿಜವಾಗುತ್ತದೆ. ಇದೀಗ ಅಂತಹುದೇ ಘಟನೆಯೊಂದು ಆಂಗುಬೆಯಲ್ಲಿ ನಡೆದಿದ್ದು ಧರ್ಮವನ್ನು ಮೀರಿದ ಕೆಲಸವೊಂದು ನಡೆದಿರುವುದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಭಾನುವಾರ ಸಂಜೆಯ ಸಮಯ. ಆಗುಂಬೆಯ ಘಾಟಿಯ ಸುಂದರ ಪರಿಸರದ ನಡುವಿನ ಏಳನೇ ತಿರುವಿನಲ್ಲಿ ಗುಜರಿ ಫ್ಯಾಕ್ಟರಿ ಮಾಲೀಕರೊಬ್ಬರು ಗಾಡಿಯನ್ನು ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದರು. ಸ್ಕ್ರ್ಯಾಪ್ ಹೊತ್ತು ಸಾಗುತ್ತಿದ್ದ ಗಾಡಿಯನ್ನು ಟ್ರ್ಯಾಕ್ಟರ್ ಟೋಯಿಂಗ್ ಮಾಡುತ್ತಿದ್ದ ವೇಳೆ ಗಾಡಿ ಬ್ರೇಕ್ ಫೇಲ್ ಆಗಿದೆ. ಈ ವೇಳೆ ಮಹಮ್ಮದ್ ಪಾಷಾ ಅವರಿಗೆ ಗುದ್ದಿದೆ. ಈ ಅವಘಡದಿಂದ ಪಾಷಾ 30 ಅಡಿ ಪ್ರಪಾತಕ್ಕೆ ಬೀಳುತ್ತಾರೆ.
30 ಅಡಿ ಪ್ರಪಾತಕ್ಕೆ ಬಿದ್ದುದರಿಂದ ಪಾಷಾಗೆ ಗಂಭೀರ ಗಾಯಗಳಾಗಿವೆ. ಮೇಲಿನಿಂದ ಬಿದ್ದ ರಭಸಕ್ಕೆ ಅವರ ಸೊಂಟ ಮತ್ತು ತಲೆಗೆ ಪೆಟ್ಟಾಗಿದೆ. ಕೂಡಲೇ ಸ್ಥಳದಲ್ಲಿದ್ದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಕಾರ್ಯಾಚರಣೆಗೆ ಇಳಿದಿದ್ದಾರೆ. ಹಿಂದು ಜಾಗರಣಾ ವೇದಿಕೆಯ ನಿತ್ಯಾನಂದ ನೇತೃತ್ವದ ತಂಡದಿಂದ ಆಗುಂಬೆ ಘಾಟ್ ಕೆಳಗಡೆ ಇಳಿದು ಬೆಡ್ ಶೀಟ್ ಹಾಗೂ ಹಗ್ಗದ ಸಹಾಯದಿಂದ ಮೇಲೆಕ್ಕೆತ್ತಿದ್ದಾರೆ. ಬಳಿಕ ಅವರಿಗೆ ಚಿಕಿತ್ಸೆ ನೀಡಲಾಯಿತು ಎಂದು ತಿಳಿದು ಬಂದಿದೆ. ಅಗತ್ಯ ಸಮಯದಲ್ಲಿ ನೆರವಾದ ಹಿಂದೂ ಕಾರ್ಯಕರ್ತರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.