ನ್ಯೂಸ್ ನಾಟೌಟ್ : ಬೀದರ್ ನಗರದ ಹೊರವಲಯದ ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕನೋರ್ವ ಮೃತಪಟ್ಟಿರುವ ಹೃದಯವಿದ್ರಾಹಕ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ಯುವಕನನ್ನು ಕಮಲನಗರ ತಾಲೂಕಿನ ಬಳತ್ (ಬಿ) ಗ್ರಾಮದ ಅರುಣ ಕಾಶಿನಾಥ ಪಡಸಾಲೆ (33) ಎಂದು ಗುರುತಿಸಲಾಗಿದೆ. ಕಳೆದ ಜೂ. 29ರಂದು ಮದುವೆಯಾಗಿದ್ದ ಅರುಣ, ತನ್ನ ಪತ್ನಿ ಗ್ರಾಮ ಹುಮನಾಬಾದ ತಾಲೂಕಿನ ಮುಗನೂರ್ನಿಂದ ನೌಬಾದ್ಗೆ ಬೈಕ್ ಮೇಲೆ ವಾಪಸ್ ಬರುವಾಗ ಸರ್ಕಾರಿ ಬಸ್ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಅರುಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಅರುಣ ಪಡಸಾಲೆ, ನೌಬಾದ್ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಈಗ ಮದುವೆಯಾದ ಎರಡು ದಿನದಲ್ಲೇ ದುರಂತ ಸಂಭವಿಸಿರುವುದು ಎರಡು ಕುಟುಂಬಗಳಿಗೆ ಆಘಾತವನ್ನುಂಟು ಮಾಡಿದೆ. ಸ್ಥಳಕ್ಕೆ ನೂತನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.