ನ್ಯೂಸ್ ನಾಟೌಟ್: ಬೆಂಗಳೂರಿನಿಂದ ಶನಿವಾರ (ಜು.1) ದೆಹಲಿಗೆ ಹೊರಟಿದ್ದ ಕೆ.ಕೆ ಎಕ್ಸ್ಪ್ರೆಸ್ (Karnataka Express) ರೈಲು ಭಾನುವಾರ ಮಹಾರಾಷ್ಟ್ರ ಸೊಲ್ಲಾಪುರದ ಮೋಹಳ ತಾಲೂಕಿನ ಘಾಟಘೆ ಗ್ರಾಮದ ಸಮೀಪ ಬರುತ್ತಿದ್ದಂತೆ ರೈಲಿನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಪೈಲಟ್ನ ಸಮಯಪ್ರಜ್ಞೆಯಿಂದಾಗಿ ಅನಾಹುತವೊಂದು ತಪ್ಪಿದೆ.
ಅತಿ ವೇಗವಾಗಿ ಚಲಿಸುತ್ತಿದ್ದ ಕೆ.ಕೆ ಎಕ್ಸ್ಪ್ರೆಸ್ (Karnataka Express) ರೈಲಿನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪೈಲಟ್ ತಕ್ಷಣ ರೈಲು ನಿಲ್ಲಿಸಿ, ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ರೈಲು ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಬೆಂಕಿ ಆವರಿಸುತ್ತಿದ್ದಂತೆ ಪೈಲಟ್ ರೈಲಿನಿಂದ ಜಿಗಿದಿದ್ದು, ಪರಿಣಾಮ ಬೆಂಕಿ ತಗುಲಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡಿದ್ದ ಪೈಲಟ್ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೈಲಟ್ನ ಸಮಯ ಪ್ರಜ್ಞೆಯಿಂದಾಗಿ ಸಾವಿರಾರು ಪ್ರಯಾಣಿಕರ ಜೀವ ಉಳಿದಿದೆ. ಸದ್ಯ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ರೈಲಿಗೆ ಮತ್ತೊಂದು ಎಂಜಿನ್ ಜೋಡಣೆ ಮಾಡಿದ್ದು, ಅಲ್ಲಿಂದ ದೆಹಲಿಗೆ ಪ್ರಯಾಣ ಮುಂದುವರಿಸಿದೆ.