ನ್ಯೂಸ್ ನಾಟೌಟ್ ಪುತ್ತೂರು: ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಮಳೆಹಾನಿ ಸಂಭವಿಸಿದೆ. ಧಾರಾಕಾರ ಮಳೆಗೆ ಅರಿಯಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು, ಕುಸಿಯುವ ಭೀತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾರ್ಥಿಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಅರಿಯಡ್ಕ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಏನೇ ತರಗತಿ ತನಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಕೊಠಡಿ ಸಮಸ್ಯೆಯಿಂದ ಒಂದೇ ಕಟ್ಟಡದಲ್ಲಿ 2 ಮತ್ತು 3ನೇ ತರಗತಿಗಳನ್ನು ನಡೆಸಲಾಗುತ್ತಿದೆ. ಶತಮಾನಗಳ ಇತಿಹಾಸ ಹೊಂದಿರುವ ಈ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆ ಮತ್ತು ಜನಪ್ರತಿನಿಧಿಗಳು ಸ್ಪಂದಿಸದಿರುವು ಮಾತ್ರ ವಿಪರ್ಯಾಸ.
ಈಗಾಗಲೇ ಶಾಲೆಯ ಮಾಡು, ಪಕ್ಕಾಸು ಮುರಿದು ಬೀಳುವ ಹಂತಕ್ಕೆ ತಲುಪಿದ್ದು, ಇದೀಗ ಭಾರಿ ಮಳೆಯಿಂದ ಶಾಲೆಯ ಗೋಡೆಯೂ ಬಿರುಕುಬಿಟ್ಟಿದೆ. ಸೋಮವಾರ ವಿದ್ಯಾರ್ಥಿಗಳನ್ನು ಪಕ್ಕದಲ್ಲಿರುವ ರಂಗಮಂದಿರಕ್ಕೆ ಸ್ಥಳಾಂತರಗೊಳಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಹಾಲ್ನಲ್ಲಿ ತರಗತಿ ನಡೆಸಬೇಕಾಗಿದೆ. ಕಟ್ಟಡ ಶಿಥಿಲಗೊಂಡಿರುವ ಕಾರಣ ಕೆಲವು ಪೋಷಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿರುವುದಾಗಿ ಪೋಷಕರು ಮಾಹಿತಿ ನೀಡಿದ್ದಾರೆ.
ಶಿಥಿಲಗೊಂಡ ಅರಿಯಡ್ಕ ಶಾಲೆ ಕಟ್ಟಡ, ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಶಾಸಕರಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಈ ಹಿಂದೆಯೇ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗಿದೆ. ಆದರೆ ಮಾಡು ದುರಸ್ತಿಗೆ ಮಾತ್ರ ಅನುದಾನ ಬಂದಿದ್ದು, ದುರಸ್ತಿ ಮಾಡಲಾಗಿದೆ. ಕಟ್ಟಡದ ಗೋಡೆಗಳು ತುಂಬಾ ಹಳೆಯದಾಗಿರುವ ಕಾರಣ ಮಳೆಗೆ ಕುಸಿತವಾಗುತ್ತಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಹನೀಫ್ ತಿಳಿಸಿದ್ದಾರೆ.
ಕಟ್ಟಡ ಬಿರುಕುಬಿಟ್ಟ ವಿಷಯ ತಿಳಿದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್, ಒಳಮೊಗ್ರು ವಲಯ ಅಧ್ಯಕ್ಷ ಅಶೋಕ್ಪೂಜಾರಿ, ರಫೀಕ್ ದರ್ಖಾಸ್, ಮಹಮ್ಮದ್ ಬೊಳ್ಳಾಡಿ ಮೊದಲಾದವರು ಭೇಟಿ ನೀಡಿದ್ದಾರೆ.