ನ್ಯೂಸ್ ನಾಟೌಟ್: ಕಾರ್ಯನಿರತ ಪತ್ರಕರ್ತರ ಮೇಲೆ ನಡೆದ ಹಲ್ಲೆ, ಮೊಬೈಲ್ ಪುಡಿ ಮಾಡಿದ ಘಟನೆ ಸಂವಿಧಾನದ ಮೇಲೆ ದಾಳಿ ಮಾಡಿದಂತೆ. ಇಂದು ಸಂವಿಧಾನದ ಒಂದೊಂದೇ ಕಂಬಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇಂತಹ ಅನಾಗರಿಕ ವರ್ತನೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿ.ಐ. ಟಿ.ಯು ರಾಜ್ಯ ಸಮಿತಿ ಸದಸ್ಯ ಮತ್ತು ಬೆಳ್ತಂಗಡಿ ವಕೀಲ ಬಿ.ಎಂ. ಭಟ್ ತಿಳಿಸಿದ್ದಾರೆ.
ಪುತ್ತೂರಿನ ಪತ್ರಕರ್ತ ನಿಶಾಂತ್ ಬಿಲ್ಲಂಪದವು ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ದ ಕರ್ತವ್ಯಕ್ಕೆ ಅಡ್ಡಿ, ಕೊಲೆ ಬೆದರಿಕೆ, ಹಲ್ಲೆ, ಸೊತ್ತು ನಾಶದಂತಹ ಗಂಭೀರ ಪ್ರಕರಣ ದಾಖಲಿಸಿ, ಆರೋಪಿತರನ್ನು ಬಂಧಿಸಿ ನ್ಯಾಯ ಒದಗಿಸಲು ಸರ್ಕಾರ ತಕ್ಷಣ ಮುಂದಾಗಬೇಕು ಎಂದು ಬಿ.ಎಂ. ಭಟ್ ಆಗ್ರಹಿಸಿದರು.
ಪತ್ರಕರ್ತರ ನಿರ್ಭಿತಿಯ ನಡೆಯೇ ಸಮಾಜದ ಒಳಿತಿಗೆ ಸಹಕಾರಿ. ಪ್ರಜಾಪ್ರಭುತ್ವದ ರಕ್ಷಣೆಯ ಪರ ಇರುವ ಪ್ರಜ್ಞಾವಂತ ದೇಶಪ್ರೇಮಿ ನಾಗರಿಕರೆಲ್ಲರೂ ಸಂವಿಧಾನ ವಿರೋಧಿಗಳ ವಿರುದ್ಧ, ಪ್ರಜಾಪ್ರಭುತ್ವ ಮೌಲ್ಯಗಳ ನಾಶ ಮಾಡುವವರ ವಿರುದ್ಧ ಒಂದಾಗಿ ಹೋರಾಟಕ್ಕೆ ಸಿದ್ಧರಾಗಬೇಕಿದೆ. ಇಂತಹ ದಾಳಿಗಳಿಂದ ಹಿಂಜರಿಯದೆ ಎದೆಗುಂದದೆ ಮುಂದೆ ಸಾಗುವ ಧೈರ್ಯ, ಸ್ಫೂರ್ತಿ ಬರಲಿ ಎಂದು ನಿಶಾಂತರಿಗೆ ಧೈರ್ಯ ತುಂಬೋಣ. ಪತ್ರಕರ್ತರ ಕೆಲಸಕ್ಕೆ ಅಡ್ಡಿ ಮಾಡುವ ಸಮಾಜಘಾತುಕ ಶಕ್ತಿಗಳ ಮಟ್ಟ ಹಾಕಬೇಕು ಎಂದು ಬಿ. ಎಂ. ಭಟ್ ತಿಳಿಸಿದ್ದಾರೆ.