ನ್ಯೂಸ್ ನಾಟೌಟ್: ಮಹಿಳೆಯೊಬ್ಬರ ಆ್ಯಪಲ್ ಫೋನ್ , ಹಣ, ಕ್ರೆಡಿಟ್ -ಡೆಬಿಟ್ ಕಾರ್ಡ್ ಇದ್ದ ಬ್ಯಾಗ್ ಅನ್ನು ಕದ್ದೊಯ್ದ ಕಳ್ಳನನ್ನು ಕೆಲವೇ ಗಂಟೆಗಳಲ್ಲಿ ಫಿಲ್ಮಿ ಶೈಲಿಯಲ್ಲಿ ಹಿಡಿದಿರುವ ರೋಚಕ ಘಟನೆ ಶನಿವಾರ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ.
ಖದೀಮ ಕಳ್ಳನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಸದ್ಯ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಬ್ಯಾಗ್ ನಿಂದ ಎರಡು ಸಾವಿರ ರೂ. ಮಾತ್ರ ತೆಗೆದಿದ್ದೇನೆ. ಮೊಬೈಲ್ ಫೋನ್ ಸೇರಿದಂತೆ ಇತರೆ ವಸ್ತುಗಳನ್ನು ಚರಂಡಿಗೆ ಎಸೆದಿರುವುದಾಗಿ ತಿಳಿಸಿದ್ದಾನೆ. ಬಳಿಕ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೊಬೈಲ್ ಫೋನ್ ಇದ್ದ ಬ್ಯಾಗ್ ಅನ್ನು ಚರಂಡಿಯಿಂದ ಹೊರ ತೆಗೆದಿದ್ದಾರೆ.
ವಿರಾಜಪೇಟೆಯಲ್ಲಿ ಮಯೂರಿ ನೃತ್ಯ ಶಾಲೆ ಸಂಸ್ಥಾಪಕಿ ಪ್ರೇಮಾಂಜಲಿ ಆಚಾರ್ಯ ಅವರು ಕರುನಾಡ ಪ್ರಶಸ್ತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಕಾಂತಾರ ಸಿನಿಮಾ ಖ್ಯಾತಿಯ ನಟರಾದ ಬಾಸುಮ ಕೊಡಗು, ಸತೀಶ್ ಆಚಾರ್ಯ ಆಗಮಿಸಿದ್ದರು. ಅಲ್ಲದೆ ಗಾಯಕ ಶಶಿಧರ್ ಕೋಟೆ, ಧರ್ಮದರ್ಶಿ ಅಶೋಕ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿ ಇತ್ತು. ಈ ಕಾರ್ಯಕ್ರಮಕ್ಕೆ ಉದ್ಯಮಿ ಪೂಜಾ ಕೂಡ ಆಗಮಿಸಿದ್ದರು. ಅವರು ದೀಪ ಬೆಳಗಿಸುವ ಕಾರ್ಯಕ್ರಮದ ವೇಳೆ ವೇದಿಕೆಗೆ ಹತ್ತಿದ್ದಾರೆ.
ಈ ವೇಳೆ ತಮ್ಮ ಬ್ಯಾಗ್ ಅನ್ನು ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಗಣ್ಯರ ಚೇರ್ನಲ್ಲಿ ಇರಿಸಿದ್ದಾರೆ. ಇದೇ ಸಮಯ ನೋಡಿಕೊಂಡು ಕಳ್ಳ ತನ್ನ ಚಮತ್ಕಾರವನ್ನು ತೋರಿಸಿದ್ದಾನೆ. ಮೆಲ್ಲಗೆ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದಾನೆ. ಒಂದೆರಡು ಗಂಟೆ ಕಳೆದು ಈ ವಿಷಯ ಪೂಜಾ ಅವರಿಗೆ ಗೊತ್ತಾಗಿದೆ. ಬ್ಯಾಗ್ಗಾಗಿ ಹುಡುಕಾಡಿದ್ದಾರೆ. ಆದರೆ ಎಲ್ಲೂ ಬ್ಯಾಗ್ ಸಿಗಲಿಲ್ಲ. ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ವಿರಾಜಪೇಟೆ ತಾಲೂಕು ಅಧ್ಯಕ್ಷ ಟಿವಿ ಅನಿಲ್ ಕುಮಾರ್ ಸ್ಥಳಕ್ಕೆ ಬಂದಿದ್ದಾರೆ. ಕಾವೇರಿ ಕಲ್ಯಾಣ ಮಂಟಪದ ಸಿಸಿ ಕ್ಯಾಮೆರಾ ಚೆಕ್ ಮಾಡಿದ್ದಾರೆ. ವ್ಯಕ್ತಿಯೊಬ್ಬ ಬ್ಯಾಗ್ ಕದ್ದು ಪರಾರಿಯಾಗಿದ್ದು ಬೆಳಕಿಗೆ ಬಂದಿದೆ.
ತಕ್ಷಣ ಅನಿಲ್ ಆತನ ಫೋಟೋವನ್ನು ಎಲ್ಲ ಗ್ರೂಪ್ ಗೆ ವಾಟ್ಸಾಪ್ ನಲ್ಲಿ ಶೇರ್ ಮಾಡಿದ್ದಾರೆ. ಹೀಗೆ ಮಾಡಿದ ಕೆಲವೇ ಗಂಟೆಗಳಲ್ಲಿ ಕಳ್ಳ ಇಲ್ಲಿದಾನೆ ಆಟೋ ರಿಕ್ಷಾವನ್ನು ಹತ್ತಿದ್ದಾನೆ . ಬೇಗ ಬಂದರೆ ಸಿಗಬಹುದು ಎಂದು ವ್ಯಕ್ತಿಯೊಬ್ಬರು ಕರೆ ಮಾಡಿ ಅನಿಲ್ಗೆ ಹೇಳುತ್ತಾರೆ. ತಕ್ಷಣ ಕಾರು ತೆಗೆದುಕೊಂಡು ಹೋದ ಅನಿಲ್ ಅವರು ಆಟೋ ರಿಕ್ಷಾವನ್ನು ಅಡ್ಡಹಾಕಿ ಕಳ್ಳನ ಹಿಡಿದಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದು ಕಳ್ಳನಿಗೆ ಎರಡು ಬಿಗಿದಾಗ ಸತ್ಯಬಾಯಿ ಬಿಟ್ಟಿದ್ದಾನೆ. ಕೊನೆಗೆ ಚರಂಡಿಯಲ್ಲಿ ಆ್ಯಪಲ್ ಮೊಬೈಲ್ ಸಹಿತ ಬ್ಯಾಗ್ ಪತ್ತೆಯಾಯಿತು. ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ಉದ್ಯಮಿ ಪೂಜಾ ಅವರು, ಅದೃಷ್ಟವಶಾತ್ ನನ್ನ ಬ್ಯಾಗ್ ಸಿಕ್ಕಿದೆ. ಅನಿಲ್ ಅವರು ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಕಳ್ಳ, ಬೆಲೆ ಬಾಳುವ ಐಫೋನ್ ಮುಟ್ಟದೆ ಕೇವಲ 2 ಸಾವಿರ ರೂ. ಮಾತ್ರ ತೆಗೆದುಕೊಂಡಿರುವುದು ವಿಶೇಷ. ಈ ಬಗ್ಗೆ ಪೊಲೀಸ್ ತನಿಖೆ ವೇಳೆ ಬಾಯಿ ಬಿಟ್ಟ ಕಳ್ಳ, ನನಗೆ ಹಣ ಮಾತ್ರ ಬೇಕಿತ್ತು. ಅದರಲ್ಲಿ ಚೆನ್ನಾಗಿ ಮದ್ಯ ಕುಡಿದಿದ್ದೇನೆ ಮತ್ತು ಊಟ ಮಾಡಿದ್ದೇನೆ ಎಂದು ಹೇಳಿದ್ದಾನೆ.