ನ್ಯೂಸ್ ನಾಟೌಟ್: ತನ್ನ ಪತ್ನಿಯ ಜತೆ ಅಕ್ರಮ ಸಂಬಂಧವಿರಿಸಿದ ಸಂಶಯದಲ್ಲಿ ಯುವಕನನ್ನು ರಾಡ್ನಿಂದ ಹೊಡೆದು ಕೊಲೆಗೈದ ಘಟನೆ ಮಂಗಳೂರು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೂಳೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ಮೂಲತಃ ಪಶ್ಚಿಮ ಬಂಗಾಳದ ಪ್ರಸ್ತುತ ಕೂಳೂರಿನಲ್ಲಿ ವಾಸವಾಗಿರುವ ಬಿಕಾಸ್ ಗುನಿಯಾ (22) ಎಂದು ಗುರುತಿಸಲಾಗಿದೆ. ಆರೋಪಿ ಪಶ್ಚಿಮ ಬಂಗಾಳದ ವಾಸುದೇವ ಗುನಿಯಾ (34) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಮೂಲದವರಾದ ಬಿಕಾಸ್ ಗುನಿಯಾ ಮತ್ತು ಆರೋಪಿ ವಾಸುದೇವ ಗುನಿಯಾ ಮಂಗಳೂರಿನ ಕೂಳೂರಿನಲ್ಲಿ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ವಾಸುದೇವ ಗುನಿಯಾನಿಗೆ ಬಿಕಾಸ್ ಗುನಿಯಾನ ಊರಿನ ಯುವತಿಯ ಜತೆ ಹಲವು ವರ್ಷಗಳ ಹಿಂದೆ ವಿವಾಹವಾಗಿತ್ತು. ಆತನ ಪತ್ನಿ ಕೂಡ ಪಶ್ಚಿಮ ಬಂಗಾಳದಲ್ಲಿ ವಾಸ್ತವ್ಯವಿದ್ದಳು. ಆಕೆಯ ಜತೆ ಬಿಕಾಸ್ ಗುನಿಯಾನಿಗೆ ಅಕ್ರಮ ಸಂಬಂಧವಿದೆ ಎಂದು ವಾಸುದೇವ ಗುನಿಯಾ ಆರೋಪಿಸಿದ್ದ. ಅಲ್ಲದೆ ಮೊಬೈಲ್ ಮೂಲಕ ಆಕೆಯ ಜತೆ ಮಾತನಾಡುತ್ತಿದ್ದ ಎಂಬ ಸಂಶಯ ವ್ಯಕ್ತಪಡಿಸಿ ಈ ವಿಚಾರದಲ್ಲಿ ಹಲವು ಬಾರಿ ಗಲಾಟೆ ಮಾಡಿದ್ದ ಎನ್ನಲಾಗಿದೆ. ಭಾನುವಾರ ಕೂಡ ಇದೇ ವಿಚಾರದಲ್ಲಿ ಜಗಳ ನಡೆದಿತ್ತು. ಮಧ್ಯಾಹ್ನ ವಾಸುದೇವ ಗುನಿಯಾ ಮದ್ಯ ಸೇವಿಸಿ ಅಕ್ರಮ ಸಂಬಂಧದ ನೆಪದಲ್ಲಿ ಬಿಕಾಸ್ ಜತೆ ತಗಾದೆ ತೆಗೆದಿದ್ದು, ಮಾತಿಗೆ ಮಾತು ಬೆಳೆದು ಆರೋಪಿ ವಾಸುದೇವ ರಾಡ್ನಿಂದ ಬಿಕಾಸ್ನ ಎದೆಗೆ ಗುದ್ದಿದ್ದಾನೆ ಇದರಿಂದ ಗಂಭೀರ ಗಾಯಗೊಂಡ ಬಿಕಾಸ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.