ನ್ಯೂಸ್ ನಾಟೌಟ್: “ಹೆಂಡತಿಯನ್ನು ಅರೆನಗ್ನಗೊಳಿಸಿ, ನೂರಾರು ಜನ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿ ತಮಿಳುನಾಡಿನಲ್ಲಿ ಯೋಧರೊಬ್ಬರು ಮಾಡಿದ ವಿಡಿಯೊ ಸಕತ್ ವೈರಲ್ (Viral Video) ಆಗಿದೆ.ಸೇನೆಯ ನಿವೃತ್ತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಎನ್. ತ್ಯಾಗರಾಜನ್ ಅವರು ಟ್ವಿಟರ್ನಲ್ಲಿ ವಿಡಿಯೊ ಶೇರ್ ಮಾಡಿದ್ದಾರೆ.
ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹವಾಲ್ದಾರ್ ಪ್ರಭಾಕರನ್ ಅವರು ಆರೋಪ ಮಾಡಿದ್ದು, “ತಿರುವಣ್ಣಾಮಲೈ ಪದವೇಡು ಗ್ರಾಮದಲ್ಲಿ ನನ್ನ ಹೆಂಡತಿಯು ಜಾಗ ಲೀಸ್ಗೆ ಪಡೆದು ಅಂಗಡಿಯೊಂದನ್ನು ನಡೆಸುತ್ತಿದ್ದಾಳೆ. ಆದರೆ, ಸುಮಾರು 120 ಜನ ಅಂಗಡಿ ಮೇಲೆ ದಾಳಿ ಮಾಡಿ, ಅಂಗಡಿಯಲ್ಲಿದ್ದ ಎಲ್ಲ ವಸ್ತುಗಳನ್ನು ಹೊರಗೆ ಹಾಕಿದ್ದಾರೆ. ಅಲ್ಲದೆ, ನನ್ನ ಪತ್ನಿಯನ್ನು ಅರೆನಗ್ನಗೊಳಿಸಿ ಹಲ್ಲೆ ನಡೆಸಿದ್ದಾರೆ” ಎಂಬುದಾಗಿ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ. ಅವರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಹಾಗೆಯೆ, ಡಿಜಿಪಿ ಸರ್, ದಯಮಾಡಿ ಸಹಾಯ ಮಾಡಿ. ಚಾಕು ತೋರಿಸಿ ನನ್ನ ಪತ್ನಿಯನ್ನು ಹೆದರಿಸಿದ್ದಾರೆ. ಆಕೆಯನ್ನು ಅರೆನಗ್ನಗೊಳಿಸಿ ದೌರ್ಜನ್ಯ ಎಸಗಿದ್ದಾರೆ. ನೆರವು ನೀಡಿ” ಎಂಬುದಾಗಿ ಯೋಧ ಮನವಿ ಮಾಡಿರುವ ವಿಡಿಯೊ ಹರಿದಾಡುತ್ತಿದೆ.
ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ಪೊಲೀಸರು ನಡೆಸಿದ್ದು, ಪ್ರಕರಣ ಗೊಂದಲಕಾರಿಯಾಗಿದೆ. ಪೊಲೀಸರು ಹೇಳುವ ಪ್ರಕಾರ ಪ್ರಕರಣವನ್ನು ವೈಭವೀಕರಿಸಿ ಯೋಧ ಹೇಳಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. “ರೇಣುಗಂಬಲ್ ದೇವಾಲಯದ ಜಾಗದಲ್ಲಿ ಅಂಗಡಿಯನ್ನು ನಿರ್ಮಿಸಲಾಗಿದ್ದು,ಕುಮಾರ್ ಎಂಬುವರು ಪ್ರಭಾಕರನ್ ಅವರ ಮಾವ (ಹೆಂಡತಿಯ ತಂದೆ) ಸೆಲ್ವಮೂರ್ತಿ ಅವರಿಂದ 9.5 ಲಕ್ಷ ರೂಪಾಯಿ ಪಡೆದು ಐದು ವರ್ಷದ ಅವಧಿಗೆ ಲೀಸ್ಗೆ ಪಡೆದಿದ್ದರು ಎನ್ನಲಾಗಿದೆ.ಕುಮಾರ್ ಅವರು ಮೃತಪಟ್ಟ ಬಳಿಕ ಅವರ ಮಗ ರಾಮು ಅಂಗಡಿಯನ್ನು ವಾಪಸ್ ಕೇಳಿದ್ದಾರೆ. ಲೀಸ್ ಮೊತ್ತವನ್ನು ವಾಪಸ್ ಕೊಟ್ಟು, ಅಂಗಡಿ ಪಡೆಯುವ ಕುರಿತು ಫೆಬ್ರವರಿ 10ರಂದು ಒಪ್ಪಂದವಾಗಿತ್ತು” ಎಂದು ಪೊಲೀಸರು ಹೇಳಿದ್ದಾರೆ.
ಒಪ್ಪಂದದಂತೆ ಜೂನ್ 10ರಂದು ಹಣ ಪಡೆಯಲು ರಾಮು ಅವರು ಸೆಲ್ವಮೂರ್ತಿ ಅವರ ಪುತ್ರರಿಗೆ ಲೀಸ್ ಹಣ ಕೊಡಲು ಹೋಗಿದ್ದಾರೆ. ಆಗ, ಸೆಲ್ವಮೂರ್ತಿ ಅವರ ಮಕ್ಕಳು ರಾಮು ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಚಾಕುವಿನಿಂದ ಅವರ ತಲೆಗೆ ಚುಚ್ಚಿದ್ದಾರೆ ಎನ್ನಲಾಗಿದ್ದು ಗಲಾಟೆ ನಡೆಯುವ ವೇಳೆ ಯೋಧ ಪ್ರಭಾಕರನ್ ಪತ್ನಿ ಅಂಗಡಿಯಲ್ಲೇ ಇದ್ದರು ಎಂದು ತಿಳಿಸಿದ್ದಾರೆ. ಈ ವೇಳೆ ಅವರ ಪತ್ನಿ ಮೇಲೆ ಹಲ್ಲೆ ನಡೆದಿಲ್ಲ ಎಂಬುದಾಗಿಯೂ ಪೊಲೀಸರು ತಿಳಿಸಿದ್ದಾರೆ .