ನ್ಯೂಸ್ ನಾಟೌಟ್ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿಂದಿನಿಂದಲೂ ಉಡುಪಿ ಮಠದ ಭಕ್ತರು. ಅವರ ಇಚ್ಛೆಯ ಪ್ರಕಾರ ಪುತ್ರಿಯ ವಿವಾಹ ಅದ್ದೂರಿಯಾಗಿ ನೆರವೇರಿದೆ.
ಕೇಂದ್ರ ಹಣಕಾಸು ಸಚಿವೆ ಪುತ್ರಿ ವಾಙ್ಮಯಿ ಅವರ ವಿವಾಹ ಪ್ರತೀಕ್ ಎಂಬುವವರ ಜತೆ ಬೆಂಗಳೂರಿನಲ್ಲಿ ನಡೆಯಿತು.ಉಡುಪಿಯ ಅದಮಾರು ಮಠದ ಬ್ರಾಹ್ಮಣ ಸಂಪ್ರದಾಯ ಪ್ರಕಾರ ವಾಙ್ಮಯಿ ಮತ್ತು ಪ್ರತೀಕ್ ಇವರ ವಿವಾಹ ಬೆಂಗಳೂರಿನ ಟ್ಯಾಮರಿಂಡ್ ಟ್ರೀ ನಲ್ಲಿ ನೆರವೇರಿದ್ದು,ಗಣ್ಯಾತಿಗಣ್ಯರು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡರು.ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹಿಸಿ ಕಳುಹಿಸಿದ ಉಡುಪಿ ಸೀರೆಯನ್ನು ಮಾನ್ಯ ಶ್ರೀಮತಿ ನಿರ್ಮಲ ಸೀತಾರಾಮನ್ ಅವರಿಗೆ ನೀಡಲಾಯಿತು. ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಈಶಪ್ರಿಯ ತೀರ್ಥ ಶ್ರೀಪಾದರು ವಧು- ವರರನ್ನು ಹರಸಿದರು. ಮಧುಪರ್ಕ, ಸೀರೆ, ಶಾಲು, ಗಂಧ ಪ್ರಸಾದವನ್ನು ಮಠದ ವ್ಯವಸ್ಥಾಪಕರಾದ ಗೋವಿಂದ ರಾಜರು ಮತ್ತು ಶಿಷ್ಯರು ಮಂತ್ರಘೋಷದ ಮೂಲಕ ನೀಡಿ ಹರಸಿದರು.
ಅಂದ ಹಾಗೆ ಉಡುಪಿ ಸೀರೆಯ ಪ್ರಮುಖ ವೈಶಿಷ್ಟ್ಯತೆಯೆಂದರೆ ನೇಕಾರರ ವಿಶಿಷ್ಟ ಕಲೆ ಹಾಗೂ ವಿನ್ಯಾಸ ಇದರಲ್ಲಿ ಅಡಗಿದೆ. ಗುಣಮಟ್ಟದಲ್ಲೂ ಉಡುಪಿ ಸೀರೆಗಳು ಮುಂದಿವೆ.‘ಉಡುಪಿ ಸೀರೆ’ ಕರಾವಳಿಯ ಹೆಮ್ಮೆಯ ಸ್ಥಳೀಯ ಉತ್ಪನ್ನಗಳಲ್ಲಿ ಒಂದು.ಅಂಚು, ಸೆರಗು ಗಾಢ ಬಣ್ಣದ್ದಾಗಿದ್ದು, ಮೈ ತಿಳಿ ಬಣ್ಣ ಹೊಂದಿದೆ. ಹಾಸು ತಯಾರಿ ನಂತರ ಸೆರಗಿಗೆ ಟೈ ಆ್ಯಂಡ್ ಡೈ ಟೆಕ್ನಿಕ್ನಲ್ಲಿ ಪ್ರತ್ಯೇಕವಾಗಿ ಬಣ್ಣ ಹಾಕಿದರೆ, ಸೀರೆ ತಯಾರಾಗುತ್ತಿರುವಾಗ ಮಗ್ಗದಲ್ಲಿ ಗಂಜಿ ಹಾಕಲಾಗುತ್ತದೆ. ತಾಳೆಮರದಿಂದ ತಯಾರಾದ ಬ್ರಶ್ ಇದಕ್ಕೆ ಬಳಕೆ ಮಾಡಲಾಗುತ್ತದೆ. ಉತ್ಪಾದಿತ ಉಡುಪಿ ಸೀರೆಗಳಿಗೆ ಶಿವಮೊಗ್ಗ ಸಾಗರ ಹೆಗ್ಗೋಡು ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಮಗ್ಗ ಸಹಕಾರ ಸಂಘ ಖರೀದಿ ಜತೆಗೆ ಮಾರುಕಟ್ಟೆಯನ್ನೂ ಒದಗಿಸುತ್ತಿದೆ. ಉಡುಪಿ ಸೀರೆಯನ್ನು ರಾಸಾಯನಿಕದಿಂದ ನೈಸರ್ಗಿಕ ಬಣ್ಣಕ್ಕೆ ಚರಕ ಸಂಸ್ಥೆಯ ನೆರವಿನಿಂದ ಪರಿವರ್ತಿಸಲಾಗುತ್ತಿದೆ.