ನ್ಯೂಸ್ ನಾಟೌಟ್ : ಹಿರಿಯ ಯಕ್ಷಗಾನ ಕಲಾವಿದರಾಗಿ ಮಿಂಚಿದ್ದ ಯಕ್ಷಶಿಕ್ಷಣದ ಗುರು, ಭಾಗವತ, ವೇಷಧಾರಿ ತೋನ್ಸೆ ಜಯಂತ್ ಕುಮಾರ್(Tonse Jayanth Kumar)(77 ವರ್ಷ) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.
ಯಕ್ಷಗಾನ(yakshagana)ದ ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸಲು ಅಪಾರವಾಗಿ ಶ್ರಮವಹಿಸಿದ್ದ ಇವರು , ಯಕ್ಷಗಾನದಲ್ಲಿ ಸದಾ ಪ್ರವೃತ್ತರು.ಸಂಚಾರಿ ಯಕ್ಷಗಾನ ಭಂಡಾರವೆಂದೇ ಖ್ಯಾತರಾಗಿದ್ದ ತೋನ್ಸೆ ಕಾಂತಪ್ಪ ಮಾಸ್ತರರ ಸುಪುತ್ರರಾಗಿದ್ದ ಇವರಿಗೆ ತಂದೆಯೇ ಯಕ್ಷಗಾನ ಗುರುವಾಗಿದ್ದರು.ಆರಂಭದಲ್ಲಿ ಯಕ್ಷಗಾನ ವೇಷಧಾರಿಯಾಗಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದ ಇವರು ನಂತರ ಯಕ್ಷಗಾನ ಗುರುಗಳಾಗಿ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು.
ಯಕ್ಷಗಾನ ಸವ್ಯಸಾಚಿ,ಯಕ್ಷವಾರಿಧಿ,ಕಾಳಿಂಗ ನಾವಡ,ಯಕ್ಷಸುಮ,ಜಾನಪದ ಅಕಾಡೆಮಿ ಪ್ರಶಸ್ತಿ ,ಶ್ರೀರಾಮ ವಿಠಲ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗೆ ಭಾಜನರಾಗಿದ್ದರು. ಜೀವಮಾನದ ಬಹುಪಾಲು ಸಮಯವನ್ನು ರಂಗಸ್ಥಳದಲ್ಲಿ ಕಳೆದಿದ್ದರು.ತಂದೆಯೇ ಇವರಿಗೆ ಪ್ರೇರಣೆ.ತಂದೆಯೊಂದಿಗೆ ತಿರುಗಾಟದಲ್ಲಿ ಕಲಿತ ಬಾಲಪಾಠ ಗಟ್ಟಿಯಾಯಿತು.ಬಾಲ್ಯದಲ್ಲಿಯೇ ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು.
ಪರಂಪರೆಯ ಶೈಲಿಗೆ ತನ್ನ ತುಂಬು ಕಂಠಸಿರಿಯನ್ನು ಮೇಳೈಸಿ ಪ್ರಸಿದ್ಧ ಭಾಗವತರಾಗಿ ಮೂಡಿಬಂದರು.ಎಳವೆಯಲ್ಲಿ ಯಕ್ಷಗಾನ ವೇಷಗಳನ್ನು ಮಾಡುತ್ತಿದ್ದ ಇವರು ಬಡಗಿನ ಪರಂಪರೆಯ ಸ್ತ್ರೀ-ಪುರುಷ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸಿದ್ದಾರೆ. ಜೂನ್ 27 ರಂದು ಬೀಡಿನಗುಡ್ಡೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ತಿಳಿದು ಬಂದಿದೆ.