ನ್ಯೂಸ್ ನಾಟೌಟ್ :ರಾಜ್ಯ ಸರ್ಕಾರವು ಅಲೋಕ್ ಕುಮಾರ್ ಸೇರಿ ನಾಲ್ವರು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಎಡಿಜಿಪಿ) ಸೇವೆ ಸಲ್ಲಿಸುತ್ತಿದ್ದ ಅಲೋಕ್ ಕುಮಾರ್ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.ಅಲೋಕ್ ಕುಮಾರ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಕಾನೂನು ಸುವ್ಯವಸ್ಥೆ ಎಡಿಜಿಪಿ ಸ್ಥಾನಕ್ಕೆ ಆರ್ ಹಿತೇಂದ್ರ (R Hithendra) ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಖಡಕ್ ಅಂಡ್ ಸ್ಟ್ರಿಕ್ಟ್ ಆಫೀಸರ್ ಅಂದ್ರೆ ಎಡಿಜಿಪಿ ಅಲೋಕ್ ಕುಮಾರ್. ಇವ್ರು ಫೀಲ್ಡ್ಗೆ ಇಳಿದ್ರೆ ಸಾಕು ಅದೆಂತಹ ಕೇಸ್ ಆದ್ರೂ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸದೆ ಬಿಡುವವರಲ್ಲ. ಇತ್ತೀಚಿಗೆ ಕರಾವಳಿಯಲ್ಲಿ ಮಸೂದ್, ಪ್ರವೀಣ್ ನೆಟ್ಟಾರ್, ಫಾಜಿಲ್ ಹತ್ಯೆಯಾಗುತ್ತಿದ್ದಂತೆ ಇಡೀ ಕರಾವಳಿಯ ಕಾನೂನು ಸುವ್ಯವಸ್ಥೆಯ ಟ್ರ್ಯಾಕ್ ಹಳಿ ತಪ್ಪಿ ಹೋಗಿತ್ತು. ಪೊಲೀಸರೂ ಕೂಡ ಏನು ಮಾಡಲಾಗದ ಸ್ಥಿತಿಯಲ್ಲಿದ್ದರು. ಆ ಸಮಯದಲ್ಲಿ ಆಗಿನ ಸಿಎಂ ಬೊಮ್ಮಾಯಿ ಖುದ್ದಾಗಿ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಕರಾವಳಿಯತ್ತ ಕಳುಹಿಸಿಕೊಟ್ಟಿದ್ದರು. ಅಲೋಕ್ ಬರುತ್ತಿದ್ದಂತೆ ಇಡೀ ಜಿಲ್ಲೆಯ ಪೊಲೀಸರಿಗೆ ದೈತ್ಯ ಶಕ್ತಿ ಬಂದಿತ್ತು. ಮೊದಲಾಗಿ ಸುಳ್ಯಕ್ಕೆ ಕಾಲಿಟ್ಟ ಎಡಿಜಿಪಿ ಇಲ್ಲೇ ಠಿಕಾಣಿ ಹೂಡಿದರು. ಅಧಿಕಾರಿಗಳೊಂದಿಗೆ ನಿರಂತರ ಸಭೆ ಮಾಡುತ್ತಲೇ ಇದ್ದರು. ಬೆಳ್ಳಾರೆ. ಸುಳ್ಯ, ಪುತ್ತೂರು, ಮಂಗಳೂರಿನಲ್ಲಿ ಹಂತಹಂತವಾಗಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಇವಿಷ್ಟು ಮಾತ್ರವಲ್ಲ ಪ್ರಕರಣದಲ್ಲಿ ಭಾಗಿಯಾಗಿದ್ದ ಒಬ್ಬೊಬ್ಬ ಹಂತಕರ ಬಗ್ಗೆ ಕ್ಷಿಪ್ರ ಮಾಹಿತಿ ಕಲೆ ಹಾಕಿಸಿದರು. ಆರೋಪಿಗಳು ಯಾರು, ಅವರ ವಿಳಾಸ, ಹೆಸರು ಎಲ್ಲವೋ ಆರಂಭದಲ್ಲಿಯೇ ಅವರಿಗೆ ಗೊತ್ತಾಗಿದೆ. ಆದರೆ ಆರೋಪಿಗಳನ್ನು ಹಿಡಿಯುವುದಕ್ಕೆ ಸಾಧ್ಯವಾಗಿರಲಿಲ್ಲ. ಇದಕ್ಕೆ ಕಾರಣ ಹಂತಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರಂತರ ತಿರುಗಾಟ ನಡೆಸುತ್ತಲೇ ಇದ್ದರು.ಯಾವಾಗ ಹಂತಕರು ಶರಣಾಗುವುದಿಲ್ಲ ಅನ್ನುವುದು ಗೊತ್ತಾಯಿತೋ ಆಗ ಎಡಿಜಿಪಿ ಅಲೋಕ್ ತಮ್ಮ ರಣತಂತ್ರ ಬದಲಾಯಿಸಿದರು. ಅಪರೂಪದಲ್ಲಿ ಅಪರೂಪವಾದ ಆಸ್ತಿ ಮುಟ್ಟುಗೋಲು ಬ್ರಹ್ಮಾಸ್ತ್ರ ಪ್ರಯೋಗಿಸಿದರು. ಈ ತಂತ್ರಕ್ಕೆ ಫಲ ಲಭಿಸಿತು. ಮೂವರು ಹಂತಕರನ್ನು ಸುಲಭವಾಗಿ ವಶಕ್ಕೆ ತೆಗೆದುಕೊಳ್ಳಲಾಯಿತು. ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇ ಆದರೆ ಎಂತಹ ಕೇಸ್ ಆದ್ರೂ ಪೊಲೀಸ್ ಇಲಾಖೆ ಪ್ರಕರಣ ಭೇದಿಸಬಲ್ಲದು ಅನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದು ಬೇಕಿಲ್ಲ.
ಅಲೋಕ್ ಕುಮಾರ್ರನ್ನು ನಕ್ಸಲ್ ನಿಗ್ರಹ ಪಡೆ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು. ಕುಕ್ಕೆ ಸುಬ್ರಮಣ್ಯ ಸಮೀಪದ ಅರಣ್ಯದಲ್ಲಿ ನಕ್ಸಲ್ ಟೆಂಟ್ಗಳ ಮೇಲೆ ದಾಳಿ ಮಾಡಿದ ಅಲೋಕ್ ಕುಮಾರ್ ನಕ್ಸಲರಿಂದ ಟಿಫನ್ ಬಾಕ್ಸ್ ಬಾಂಬ್, ಏಳು ಕಿಟ್ ಬ್ಯಾಗ್, ಬಂದೂಕು ವಶಪಡಿಸಿಕೊಂಡಿದ್ದರು. ಉಡುಪಿ ಭಾಗದಲ್ಲಿ ನಕ್ಸಲ್ ಹಾವಳಿಯನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದ ಹೆಗ್ಗಳಿಕೆ ಇವರದ್ದು.ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್. ನಕ್ಸಲ್ ನಿಗ್ರಹ ದಳ, ಸಿಸಿಬಿ, ಬೆಂಗಳೂರು ನಗರ ಪೊಲೀಸ್, ಕಲಬುರಗಿ ಐಜಿಪಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ಒಳ್ಳೆಯ ಹೆಸರುಗಳಿಸಿದವರು. ಉತ್ತಮ ಹೆಸರಿನ ಜೊತೆ ಹಲವು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡವರು. ಒಂದು ವರ್ಷದ ಅಮಾನತು ಶಿಕ್ಷೆಯನ್ನು ಎದುರಿಸಿದವರು.
ಯಾರಿವರು ಅಲೋಕ್ ಕುಮಾರ್ ?
ಅಲೋಕ್ ಕುಮಾರ್ ಬಿಹಾರ ಮೂಲದ ಸಹರಾ ಜಿಲ್ಲೆಯವರು. 1969 ಮಾರ್ಚ್ 8ರಂದು ಜನಿಸಿದ ಅವರು ಎಂಎ, ಎಂಬಿಎ ಪದವಿ ಪಡೆದಿದ್ದಾರೆ. 1994ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಕರ್ನಾಟಕದಲ್ಲಿ ಮೊದಲು ಕೆಲಸ ಆರಂಭಿಸಿದ ಅಲೋಕ್ ಕುಮಾರ್ ಬೆಳಗಾವಿಯಲ್ಲಿ ಎಎಸ್ಪಿಯಾಗಿ ಕಾರ್ಯ ಆರಂಭಿಸಿದರು. ಚಿತ್ರದುರ್ಗ, ಕಲಬುರಗಿ, ದಾವಣಗೆರೆ ಜಿಲ್ಲೆಯಲ್ಲಿ ಕೆಲಸ ಮಾಡಿದ್ದಾರೆ.