ನ್ಯೂಸ್ ನಾಟೌಟ್ : ಇಡೀ ದೇಶವನ್ನೇ ಶೋಕ ಸಾಗರದಲ್ಲಿ ಮುಳುಗಿಸುವಂತೆ ಮಾಡಿದ್ದ ಒಡಿಶಾದ ಬಾಲಸೋರ್ನಲ್ಲಿ ತ್ರಿವಳಿ ರೈಲು ಅಪಘಾತ ದುರಂತದ ಸ್ಥಳದಲ್ಲಿ ಹಾನಿಗೊಳಗಾಗಿದ್ದ ಹಳಿಯನ್ನು ದುರಸ್ಥಿ ಮಾಡಲಾಗಿದೆ.ಇದೀಗ 2 ದಿನಗಳ ಬಳಿಕ ಪ್ಯಾಸೆಂಜರ್ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಆರಂಭಿಸಿದೆ!
ಈ ಬಗ್ಗೆ ಟ್ವೀಟ್ ಮೂಲಕ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರಂತರ ಶ್ರಮದಿಂದ ಹಾನಿಗೊಳಗಾಗಿದ್ದ ಮಾರ್ಗವನ್ನು ದುರಸ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದರು. ಅದರಂತೆ, ಬೆಂಗಳೂರು –ಹೌರಾ ಎಕ್ಸ್ಪ್ರೆಸ್ ರೈಲು ಅಪಘಾತಕ್ಕೀಡಾದ ಮಾರ್ಗದಲ್ಲಿ ನಿನ್ನೆ ರಾತ್ರಿ 10.40ಗಂಟೆಗೆ ಸಂಚರಿಸಿದೆ. ವಿಶಾಖಪಟ್ಟಣದ ಬಂದರಿನಿಂದ ಕಲ್ಲಿದ್ದಲು ತುಂಬಿದ್ದ ಗೂಡ್ಸ್ ರೈಲು ರೂರ್ಕೆಲಾ ಸ್ಟೀಲ್ ಪ್ಲಾಂಟ್ನತ್ತ ಸಂಚರಿಸಿತ್ತು ಎಂದು ಮಾಹಿತಿ ಲಭ್ಯವಾಗಿದೆ.ತ್ರಿವಳಿ ರೈಲು ಅಪಘಾತ ಸಂಭವಿಸಿದ 51 ಗಂಟೆಗಳ ಬಳಿಕ ಈ ಮಾರ್ಗದಲ್ಲಿ ಸಂಚರಿಸಿದ ಮೊದಲ ರೈಲು ಇದಾಗಿದ್ದು, ಇಂದು ಬೆಳಗ್ಗಿನ ವೇಳೆ ಪ್ಯಾಸೆಂಜರ್ ರೈಲು ಸಹ ಸಂಚರಿಸಿದೆ ಎಂದು ಎಎನ್ಐ ವಿಡಿಯೊ ಸಹಿತ ಟ್ವೀಟಿಸಿದೆ.
ಬಾಲಸೋರ್ ಜಿಲ್ಲೆಯಲ್ಲಿ ನಡೆದ ಈ ರೈಲು ಅಪಘಾತ ದುರಂತದಲ್ಲಿ 288 ಜನರು ಸಾವನ್ನಪ್ಪಿದರು. 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದುರಂತದ ಬಳಿಕ ಈ ಮಾರ್ಗದಲ್ಲಿ ಸಾಗುವ ಸುಮಾರು 70 ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ಆದ್ದರಿಂದ ಪ್ರಯಾಣಿಕರು ವಿವಿಧ ರೈಲು ನಿಲ್ದಾಣಲ್ಲಿ ಸಿಲುಕಿಕೊಂಡು ಪರದಾಡುವಂತೆ ಆಗಿತ್ತು.